ವಕ್ಫ್‌ ಆಸ್ತಿ ಗೊಂದಲಕ್ಕೆ ಬಿಜೆಪಿ ಸರ್ಕಾರವೇ ಕಾರಣ

ವಕ್ಫ್‌ ಆಸ್ತಿ ಗೊಂದಲಕ್ಕೆ ಬಿಜೆಪಿ ಸರ್ಕಾರವೇ ಕಾರಣ

ದಾವಣಗೆರೆ, ನ.17- ಇಂದು ರಾಜ್ಯಾದ್ಯಂತ ವಕ್ಫ್‌ ಆಸ್ತಿ ಹೆಸರಿನಲ್ಲಿ ನಡೆಯುತ್ತಿರುವ ಗೊಂದಲಕ್ಕೆ ಬಿಜೆಪಿ ಸರ್ಕಾರವೇ ಕಾರಣವಾ ಗಿದ್ದು, ಗೊಂದಲ ಸೃಷ್ಠಿಸಿ ಜನರನ್ನು ದಿಕ್ಕು ತಪ್ಪಿಸಿದ ಬಿಜೆಪಿಯಿಂದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ ಮತ್ತು ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇ ಕೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ದಿನೇಶ್ ಕೆ.ಶೆಟ್ಟಿ ಆಗ್ರಹಿಸಿದ್ದಾರೆ.

2008ರಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಅಂದಿನ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮೂಲಕ ವಕ್ಫ್‌ ಆಸ್ತಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, 2012ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರಿಗೆ ವರದಿ ನೀಡಿತ್ತು. ಈ ವರದಿ ಆಧರಿಸಿ ಸದಾನಂದ ಗೌಡ ಅವರು ರಾಜ್ಯದಲ್ಲಿ 27 ಸಾವಿರ ಎಕರೆ ಜಮೀನು ವಕ್ಫ್‌ ಆಸ್ತಿ ಆಗಿದ್ದು, ಅದನ್ನು ವಾಪಾಸ್ ಪಡೆಯಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪೂರಕವಾಗಿ ಈ ಹಿಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರೂ ಸಹ ಮುಸ್ಲಿಂ ಸಮಾಜದ ಮುಖಂಡರ ಸಭೆಯಲ್ಲಿ ವಕ್ಫ್‌ ಆಸ್ತಿ ಬಗ್ಗೆ ಗಂಭಿರವಾಗಿ ಪರಿಗಣಿಸಿ ವಾಪಾಸ್ ನೀಡಲಾಗುವುದು ಎಂದು ತಿಳಿಸಿದ್ದರು.

ಆದರೆ ಇಂದು ತಮ್ಮ ಹೇಳಿಕೆಗಳ ಬಗ್ಗೆ ಚಕಾರವೆತ್ತದ ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಮುಖಂಡರುಗಳು ಗೊಂದಲದ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಸರ್ಕಾರ ಸುಮೋಟ ಪ್ರಕರಣ ದಾಖಲಿಸುವಂತೆ ದಿನೇಶ್ ಒತ್ತಾಯಿಸಿದ್ದಾರೆ.

ಜಿಲ್ಲಾ ಬಿಜೆಪಿ ಮುಖಂಡರು ವಕ್ಫ್‌ ಬಗ್ಗೆ ಮಾತನಾಡುವ ವೇಳೆ ಸರಿಯಾದ ಸಾಕ್ಷಿ ಇಟ್ಟು ಮಾತನಾಡಲಿ ಅದನ್ನು ಬಿಟ್ಟು ಜನರನ್ನು ಗೊಂದಲಕ್ಕೆ ಸಿಲುಕಿಸಿ ಅಶಾಂತಿ ಸೃಷ್ಟಿಸುವುದನ್ನು ಬಿಡಲಿ ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ವಕ್ಫ್‌ ಮಂಡಳಿ ದಾವಣಗೆರೆ ಪಿ.ಜೆ.ಬಡಾವಣೆಯ ಜಮೀನು ನಮ್ಮದ್ದಲ್ಲ ಎಂದು ಸ್ಪಷ್ಟಪಡಿಸಿದ್ದರೂ ಸಹ ಬಿಜೆಪಿಯವರು ಗೊಂದಲ ಸೃಷ್ಟಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ತಾವು ಅಧಿಕಾರಕ್ಕೆ ಬರಬೇಕೆಂಬ ಕಾರಣವೇ ಎಂದು ಅವರು ಕೇಳಿದ್ದಾರೆ.

error: Content is protected !!