ಸುಪ್ರೀಂ ಕೋರ್ಟ್ ತೀರ್ಪು ಮಾದಿಗ ಸಮುದಾಯದ ಸಮಗ್ರ ಪ್ರಗತಿಗೆ ರಹದಾರಿ

ಸುಪ್ರೀಂ ಕೋರ್ಟ್ ತೀರ್ಪು ಮಾದಿಗ ಸಮುದಾಯದ ಸಮಗ್ರ ಪ್ರಗತಿಗೆ ರಹದಾರಿ

ದಾವಣಗೆರೆ, ನ.15- ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂಬ ಸುಪ್ರೀಂಕೋರ್ಟ್ ತೀರ್ಪು ಮಾದಿಗ ಸಮುದಾಯದ ಸಮಗ್ರ ಪ್ರಗತಿಗೆ ರಹದಾರಿ ಹಾಗಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೀಗ ಕೋರ್ಟ್ ತೀರ್ಪಿನ ನಂತರ ರಾಜ್ಯ ಸರ್ಕಾರದ ಅಂಗಳದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸುವ ಚೆಂಡು ಇದೆ. ಅನೇಕ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಮಾದಿಗ ಮತ್ತು ಸಹೋದರ ಜಾತಿಗಳಿಗೆ ಒಳ ಮೀಸಲಾತಿ ವರವಾಗಿ ಪರಿಣಮಿಸಲಿದೆ ಎಂದರು.

ಸಾಮಾಜಿಕ ನ್ಯಾಯದ ಹರಿಕಾರರೂ, ಅಹಿಂದ ನಾಯಕ ಎಂದೇ ಬಿಂಬಿತವಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ವಿಷಯದಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಒಳಮೀಸಲಾತಿ ಜಾರಿಗೊಳಿಸಿ, ದಲಿತರ ಕಣ್ಮಣಿ ಆಗುವ ಅವಕಾಶ ನೀಡಿದೆ ಎಂದು ಹೇಳಿದರು.

ಕಳೆದ ಮೂರು ದಶಕಗಳ ಹೋರಾಟದ ಫಲವಾಗಿ ಮತ್ತು ಸರ್ವ ಪಕ್ಷಗಳ ಸರ್ಕಾರಗಳ ಸಹಕಾರ, ಬದ್ಧತೆ ಕಾರಣಕ್ಕೆ  ಪರಿಶಿಷ್ಟ ಜಾತಿ ಗುಂಪಿನಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಸಂದರ್ಭ ಎದುರಾಗಿದೆ ಎಂದರು.

ಯಾರ ಒತ್ತಡಕ್ಕೂ ಮಣಿಯದೇ ಒಳ ಮೀಸಲಾತಿ ಜಾರಿಗೊಳಿಸುವ ನಿರ್ಣಯ ಕೈಗೊಂಡಿದ್ದು, ಅದರ ಮೊದಲ ಹೆಜ್ಜೆಯಾಗಿ ದತ್ತಾಂಶ ಸಂಗ್ರಹಕ್ಕೆ ಆಯೋಗ ರಚಿಸಿ, ಅಧ್ಯಕ್ಷರನ್ನಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರನ್ನು ನೇಮಕ ಮಾಡಿರುವುದು ಪರಿಶಿಷ್ಟ ಸಮುದಾಯದಲ್ಲಿ ಆಶಾಕಿರಣ ಮೂಡಿಸಿದೆ ಎಂದು ಹೇಳಿದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಹೋರಾಟದ ಪರಿಣಾಮ ಈ ಹಿಂದೆ ರಚನೆಗೊಂಡಿದ್ದ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ಎಸ್ಸಿಗೆ 15 ರಿಂದ 17, ಎಸ್ಟಿಗೆ ಶೇ. 3 ರಿಂದ 7 ಒಟ್ಟು 18 ರಿಂದ ಶೇ. 24 ಕ್ಕೆ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಏರಿಕೆಯಾಗಿದೆ. ಆದ್ದರಿಂದ ಸಾಮಾಜಿಕ, ಜಾತಿ ವ್ಯವಸ್ಥೆ, ಹಿಂದುಳಿದ ವರ್ಗದ ಜನರ ಕುರಿತು ಹೆಚ್ಚು ಕಾಳಜಿ ಹೊಂದಿರುವ ನಾಗಮೋಹನ್ ದಾಸ್ ನೇಮಕ ಅತ್ಯಂತ ಉತ್ತಮ ನಿರ್ಧಾರವಾಗಿದೆ ಎಂದರು.

ರಾಜ್ಯದೆಲ್ಲೆಡೆ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೆಲವು ಜಿಲ್ಲೆಗಳಲ್ಲಿ ಮಾದಿಗ ಹಾಗೂ  ಛಲವಾದಿ ಸಮುದಾಯದವರು ಆದಿ ಕರ್ನಾಟಕ ಎಂದು ಗುರುತಿಸಿಕೊಂಡಿದ್ದು, ಗೊಂದಲ ಉಂಟು ಮಾಡಿದೆ. ಆದ್ದರಿಂದ ನಾಗಮೋಹನ್ ದಾಸ್ ಅವರು ಈ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿ, ಮಾದಿಗ ಮತ್ತು ಅದರ ಉಪ ಜಾತಿಗಳಿನ್ನು ಗುರುತಿಸಿ, ನೊಂದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ವಿಶ್ವಾಸ ತಮ್ಮದಾಗಿದೆ ಎಂದು ಹೇಳಿದರು.

2011 ರಲ್ಲಿ ಕೇಂದ್ರ ಸರ್ಕಾರ ನಡೆಸಿದ ಎಲ್‌.ಜಿ.ಹಾವನೂರ್, ನ್ಯಾಯಮೂರ್ತಿ ಸದಾಶಿವ, ಕಾಂತರಾಜ್ ಆಯೋಗಗಳ ವರದಿಗಳನ್ನು ಅಧ್ಯಯನ ನಡೆಸಿದರೆ ದತ್ತಾಂಶ ಮಾಹಿತಿ ದೊರೆಯಲಿದೆ. ಜೊತೆಗೆ ಒಳ ಮೀಸಲಾತಿ ಜಾರಿಗೆ ಇರುವ ಸಣ್ಣ ಪುಟ್ಟ ಅಡ್ಡಿಗಳನ್ನು ತಕ್ಷಣ ನಿವಾರಿಸಬಹುದು ಎಂದು ತಿಳಿಸಿದರು.

ಭಾರತದಲ್ಲೆ ಮೊದಲ ಬಾರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ನಿರ್ಧಾರವನ್ನು ಅಂದು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭದಲ್ಲಿ ನಾನು ಹೆಚ್ಚು ಕಾಳಜಿಯಿಂದ ವರದಿ ತಯಾರಿಸಲಾಗಿತ್ತು. ಇದೇ ದೇಶದಲ್ಲಿಯೇ ಐತಿಹಾಸಿಕ ನಿರ್ಧಾರವಾಗಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಕಾಂತರಾಜ್ ಆಯೋಗ ನಡೆಸಿದ ಸಮೀಕ್ಷೆಯಲ್ಲಿ 1 ಲಕ್ಷದ 50 ಸಾವಿರ ಶಿಕ್ಷಕರು ಪಾಲ್ಗೊಂಡಿದ್ದರು. ತಹಶೀಲ್ದಾರ್, ಜಿಲ್ಲಾಧಿಕಾರಿಗಳು, ಐಎಎಸ್ ಅಧಿಕಾರಿಗಳು ಉಸ್ತುವಾರಿ ವಹಿಸಿಕೊಂಡಿದ್ದರು. ಇದಕ್ಕಾಗಿ ರಾಜ್ಯ ಸರ್ಕಾರ 180 ಕೋಟಿ ರೂ. ವೆಚ್ಚ ಮಾಡಿ ಅತ್ಯಂತ ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿದೆ. ಪ್ರತಿ ಮನೆಗೂ ಭೇಟಿ ನೀಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ. ಈ ವರದಿಯಿಂದಾಗಿ ಎಲ್ಲಾ ವರ್ಗಗಳ ನೊಂದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಸಹಕಾರಿಯಾಗಲಿದೆ ಎಂದರು.

ಕಾಂತರಾಜ್ ಆಯೋಗ ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಕುರಿತು ಯಾವುದೇ ರೀತಿಯ ಟೀಕೆ, ಆರೋಪ, ಬೆದರಿಕೆ , ವಿರೋಧ ವ್ಯಕ್ತವಾದರೂ ಸಿದ್ಧರಾಮಯ್ಯ ಜಗ್ಗಬಾರದು. ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ, ಚರ್ಚಿಸಿ ವರದಿಯನ್ನು ಬಹಿರಂಗಪಡಿಸಬೇಕು. ಬಳಿಕ ಸಣ್ಣಪುಟ್ಟ ಲೋಪದೋಷಗಳಿದ್ದರೆ ಸರಿಪಡಿಸಬಹುದು. ಈ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿದರು.

ಅನಗತ್ಯ ಟೀಕೆ, ಆರೋಪ ಮಾಡುವುದು ಸರಿಯಲ್ಲ. ಸರ್ಕಾರದ ಅಡಿಯಲ್ಲಿ ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು, ಶಿಕ್ಷಕರು, ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳು ಸೇರಿದಂತೆ ಅನೇಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಶ್ರಮವನ್ನು ಗೌರವಿಸಬೇಕೆಂದರು.

ವರದಿ ಬಹಿರಂಗಗೊಂಡ ಬಳಿಕ ವಿರೋಧ ಮಾಡುವವರು ತಪ್ಪುಗಳನ್ನು ಗುರುತಿಸಿ ಹೇಳಲಿ. ಇಂತಹ ಪ್ರದೇಶಗಳಲ್ಲಿ ಸರ್ವೇ ಆಗಿಲ್ಲ ಎಂದು ಹೇಳಲಿ. ಆಗ ಅದು ಸತ್ಯವೇ ಆಗಿದ್ದರೆ ಆ ಪ್ರದೇಶಗಳಲ್ಲಿ ಮರು ಸಮೀಕ್ಷೆ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕೋಣ. ಈ ಸಂಬಂಧ ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ ಎಂದರು. 

ಬಹಿರಂಗಕ್ಕೂ ಮುನ್ನವೇ ವಿರೋಧ ಮಾಡಿದರೆ ನಾವು ಸಹಿಸುವುದಿಲ್ಲ. ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಸ್ವೀಕಾರ, ಮಂಡನೆ, ಬಹಿರಂಗಗೊಳಿಸುವುದು  ತುರ್ತು ಅಗತ್ಯವಿದೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ, ಕಣ್ಣಾಳ್ ಅಂಜಿನಪ್ಪ, ಎಸ್. ಮಲ್ಲಿಕಾರ್ಜುನ್, ಅಳಗವಾಡಿ ನಿಂಗಪ್ಪ, ಈರಣ್ಣ ಉಪಸ್ಥಿತರಿದ್ದರು. 

error: Content is protected !!