`ಆಸ್ಪತ್ರೆ ಹೂವು, ಗದುಗೆಮ್ಮನ ಹೂವು?!!’

`ಆಸ್ಪತ್ರೆ ಹೂವು, ಗದುಗೆಮ್ಮನ ಹೂವು?!!’

ಸುಮಾರು 1968ನೇ ಇಸವಿ ಇರಬಹುದು. ನನ್ನ ಪುಟ್ಟ ತಂಗಿ ಸುಲೋಚನಾ ಹಾಗೂ ಅವಳ ಓರಗೆಯ ಗೌಡರ ಮಂಜುಳಾ, ಶೆಟ್ರ ಗೀತಾ, ಜೈನರ ರತ್ನ, ಗುಜ್ಜರ ಯಶೋಧ, ಸಾವುಜಿ ಜಯಲಕ್ಷ್ಮಿ, ಅಕ್ಕಸಾಲಿ ಪ್ರೇಮ ಮುಂತಾದ ಹುಡುಗಿಯರೆಲ್ಲಾ ಕುಳಿತು ಗೌರಿ ಆರತಿಯ ಬಗ್ಗೆ ಮಾತನಾಡುತ್ತಿದ್ದರು.

ಆರತಿಯ ಜೊತೆಗೆ ತೆಗೆದುಕೊಂಡು ಹೋಗುವ ಹೂವಿನ ವಿಷಯವೂ ಆಗ ಬಂದಿತು. ಆಗೆಲ್ಲಾ ದೇವರ ಪೂಜೆಗೆ ಮಾರುಕಟ್ಟೆಯಿಂದ ಕೊಂಡು ತಂದ ಹೂವಿಗಿಂತಾ ಮನೆಯ ಆಸುಪಾಸಲ್ಲೇ ಬೆಳೆಯುವ ಕಣಗಿಲ, ದಾಸವಾಳ, ನಂದಿಬಟ್ಟಲು, ನಿತ್ಯ ಪುಷ್ಪ ಮುಂತಾದ ಹೂವುಗಳನ್ನೇ ಬಳಸಲಾಗುತ್ತಿತ್ತು. 

ಈ ಹೂವುಗಳಲ್ಲದೇ ಗೌರಿ ಆರತಿಗೆ ಸಾಮಾನ್ಯವಾಗಿ ಕಾರ್ತಿಕ ಮಾಸದಲ್ಲಿ ಹೇರಳವಾಗಿ ಸಿಗುವ ಮತ್ತೊಂದು ಹೂವನ್ನೂ ಬಳಸಲಾಗುತ್ತಿತ್ತು. ಈ ಹೂವಿನ ವಿಷಯ ಬರುತ್ತಲೇ ನಮ್ಮ ತಂಗಿ `ಹೌದು, ಅದು ಗದುಗಮ್ಮನ ಹೂವು’ ಎಂದರೆ, `ಅಲ್ಲ ಅದು ಸಣ್ಣ ಆಸ್ಪತ್ರೆ ಹೂವು’ ಎಂದು ಗೀತಾ ಹೇಳಿದಳು. `ಹೌದಾ? ಅದಕ್ಕೆ ನಾವು `ಉಂಡೆ ಬೀದಿ ಹೂವು’ ಎನ್ನುತ್ತೇವೆ ಎಂದಳು ಯಶೋಧ. ಏನಿದು ವಿಚಿತ್ರ ಹೆಸರುಗಳ ಆ ಒಂದು ಹೂವು ಎಂದು ವಿಚಾರಿಸಿದಾಗ ತಿಳಿದುಬಂದಿದ್ದು, ಆ ಹೂವು ಮತ್ತಾವುದೂ ಅಲ್ಲ, `ಆಕಾಶ ಮಲ್ಲಿಗೆ’. 

ರಸ್ತೆ ಬದಿಯ ದೊಡ್ಡ ಮರಗಳ ಸಾಲಿಗೆ ಸೇರುವ `ಇಂಡಿಯನ್ ಕಾರ್ಕ್ ಟ್ರೀ’ ಎಂದು ಕರೆಯಲಾಗುವ `ಮಿಲ್ಲಿಂಗ್ ಟೋನಿಯ ಹಾರ್ಟೆನ್ಸಿಸ್’ ಎಂಬ ವೈಜ್ಞಾನಿಕ ಹೆಸರಿನ ವೃಕ್ಷದ ಈ ಹೂವು ಮಳೆಗಾಲ ಮುಗಿದು ಚಳಿಗಾಲದ ಆಸುಪಾಸಿನಲ್ಲಿ ಹೇರಳವಾಗಿ ಅರಳಿ ರಸ್ತೆಯಲ್ಲೆಲ್ಲಾ ಬಿದ್ದಿರುತ್ತದೆ. ನಮ್ಮ ನಗರದ ಎಂ.ಜಿ.ರಸ್ತೆ ಮತ್ತು ಚಾಮರಾಜಪೇಟೆ ವೃತ್ತದ ಮಧ್ಯದಲ್ಲಿರುವ ಸಣ್ಣಾಸ್ಪತ್ರೆ, ಹಳೆ ಆಸ್ಪತ್ರೆ, ಹೆರಿಗೆ ಆಸ್ಪತ್ರೆ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯ ರಸ್ತೆಯಲ್ಲಿ ಈ ಆಕಾಶ ಮಲ್ಲಿಗೆ ಹೂವಿನ ಮರಗಳು ಇದ್ದವು. ಆದ್ದರಿಂದಲೇ ಗೀತಾ ಈ ಹೂವಿಗೆ `ಆಸ್ಪತ್ರೆ ಹೂವು’ ಎಂದಿದ್ದು. ಅದೇ ಬೀದಿಯಲ್ಲಿ ಕಾರ್ ಸೇವು ಉಂಡೆ ಮಾಡುವ ಮನೆಯೊಂದಿತ್ತು, ಹಾಗಾಗಿಯೇ ಯಶೋಧ ಈ ಹೂವಿಗೆ `ಉಂಡೆ ಬೀದಿ ಹೂವು’ ಎಂದದ್ದು. ಗೌರಿ ಆರತಿಗಾಗಿ ಈ ಹೂವುಗಳನ್ನು ಅದೇ ಆಸ್ಪತ್ರೆಯಲ್ಲಿ ನೌಕರಿಯಲ್ಲಿದ್ದ ಗದುಗಮ್ಮ (ದಾವಣಗೆರೆ ವರದಿಗಾರರ ಕೂಟದ ಹಾಲಿ ಅಧ್ಯಕ್ಷ, ಪತ್ರಕರ್ತ ಬಡಿದಾಳ್ ನಾಗರಾಜರ ಅಜ್ಜಿ, ಈ ಗದುಗಮ್ಮ ಹಾಗೂ ಇವರ ಸಮಕಾಲೀನರಾದ ಮಿಡ್ ವೈಫುಗಳು, ನರ್ಸ್ ಗಳು ಮತ್ತು ಡಾಕ್ಟರ್‌ಗಳ ವಿಶೇಷತೆಗಳ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ) ಆಸ್ಪತ್ರೆ ಡ್ಯೂಟಿ ಮುಗಿಸಿ, ಮನೆಗೆ ಹೋಗುವಾಗ ಗದುಗಮ್ಮ ಈ ಹೂವುಗಳನ್ನು ಆಯ್ದು ತಂದು ಕೊಟ್ಟಿದ್ದರು. ಹೀಗಾಗಿ ನಮ್ಮ ತಂಗಿ ಈ ಹೂವಿಗೆ `ಗದುಗಮ್ಮನ ಹೂವು’ ಎಂದದ್ದು. ಒಟ್ಟಾರೆ ಗೌರಿಗೆ ಅನೇಕ ಬಗೆಯ ಆರತಿಗಳು, ಅನೇಕ ಬಗೆಯ ಹಾಡುಗಳಂತೆಯೇ ಹೂವಿಗೂ ಅನೇಕ ಬಗೆಯ ಹೆಸರುಗಳು ಬಂದದ್ದು ಸ್ವಾರಸ್ಯ.

  ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ

error: Content is protected !!