ದಾವಣಗೆರೆ, ನ.14- ನಗರದ ಕೆಎಸ್ಆರ್‌ಟಿಸಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿ, ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ 5.08 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿಕಾರಿಪುರ ತಾಲ್ಲೂಕು ಬೇಗೂರು ಗ್ರಾಮದ ಗೀತಾ ವೀರಭದ್ರಾಚಾರ್ ಇಲ್ಲಿನ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ 92 ಸಾವಿರ ಮೌಲ್ಯದ 22 ಗ್ರಾಂ. ಬಂಗಾರ ಕಳ್ಳತನವಾದ ಬಗ್ಗೆ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಲೇಬೆನ್ನೂರಿನ ದಾದಾಪೀರ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನಿಂದ 5,08,000 ಲಕ್ಷ ರೂ ಮೌಲ್ಯದ 98 ಗ್ರಾಂ ಬಂಗಾ ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಟಿಜೆ ನಗರ ಠಾಣೆಯಲ್ಲಿ ದಾಖಲಾಗಿದ್ದ 3 ಕಳ್ಳತನ ಪ್ರಕರಣ ಹಾಗೂ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 1 ಕಳ್ಳತನ ಪ್ರಕರಣದಲ್ಲಿ ಆರೋಪಿ ದಾದಾಪೀರ್ ಭಾಗಿಯಾಗಿದ್ದ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ್ ಎಂ. ಸಂತೋಷ್, ಮಂಜುನಾಥ್, ನಗರ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಇವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್.ಎಸ್. ಸುನೀಲ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಆರ್. ಲತಾ ಹಾಗೂ ಸಿಬ್ಬಂದಿ ಸುರೇಶ್ ಬಾಬು, ಮಹಮದ್ ರಫಿ, ಪ್ರಕಾಶ್, ಪುರುಶೋತ್ತಮ, ಸಿದ್ದಪ್ಪ, ಟಿ. ಮಂಜಪ್ಪ, ಸಿ.ಕೆ. ಗೀತಾ ಮತ್ತು ರಾಮಚಂದ್ರ ಜಾಧವ್ ಒಳಗೊಂಡ ತಂಡ ಪ್ರಕರಣ ಬೇಧಿಸಿದೆ.