ಹರಪನಹಳ್ಳಿಯ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್
ಹರಪನಹಳ್ಳಿ, ನ. 14 – ಮಕ್ಕಳು ತಮ್ಮ ಹಕ್ಕು ಹಾಗೂ ಸಾಮಾಜಿಕ ಕಾರ್ಯವನ್ನು ಕೈಗೊಳ್ಳಲು ಕಾನೂನಿನ ಸಾಮಾನ್ಯ ಜ್ಞಾನ ಅವಶ್ಯವಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ಹೇಳಿದರು.
ತಾಲ್ಲೂಕಿನ ಯಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸೀಮಿತ ವಕೀಲ ಸಂಘ, ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಾಪುರ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಮಕ್ಕಳ ಸರ್ವಾಂಗೀಣ ಅಭಿವದ್ಧಿಗೆ ಪೂರಕವಾಗಿದ್ದು ಇಂದಿನ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಅವಶ್ಯವಾಗಿದೆ. ವಿದ್ಯಾರ್ಥಿಗಳಿಗೆ ಸಾಧಕರ ಜೀವನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯವನ್ನು ಕೆಗೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಸರ್ವರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಕಾನೂನು ಅರಿತು ಮುನ್ನಡೆದರೆ ಸಮಸ್ಯೆಗಳನ್ನು ಸರಳ ವಾಗಿ ನಿಭಾಯಿಸಬಹುದು. ಕಾನೂನಿಗೆ ಗೌರವ ನೀಡಿದರೆ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗುತ್ತದೆ. ಆದ್ದರಿಂದ ಪಠ್ಯದ ಜತೆ ಕಾನೂನು ಅರಿವನ್ನು ಹೊಂದುವುದು ಮುಖ್ಯವಾಗಿದೆ ಎಂದರು.
ಪ್ಯಾನೆಲ್ ವಕೀಲ ಎಂ. ಮೃತ್ಯುಂಜಯ ಮಾತನಾಡಿ, ರಾಷ್ಟ್ರದ ಮುಂದಿನ ಭವಿಷ್ಯ ಇಂದಿನ ಶಾಲಾ ಕೊಠಡಿಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ಆದ್ದರಿಂದ, ಮಕ್ಕಳು ಸರ್ಕಾರದ ಯೋಜ ನೆಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ಉತ್ತಮ ಪ್ರಜೆಯಾಗಬೇಕು. ಶಿಕ್ಷಣ ಹಕ್ಕು ಕಾಯ್ದೆಯಡಿ 1 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಪ್ಯಾನಲ್ ವಕೀಲ ನಳೀನ ಮಾತನಾಡಿ, ವಿದ್ಯಾರ್ಥಿಗಳು ಮೋಟಾರ್ ಆಕ್ಟ್ ಕುರಿತು ತಿಳಿದುಕೊಳ್ಳಬೇಕು. ಅದೇ ರೀತಿ ಮೂಲ ಹಕ್ಕುಗಳ ಬಗ್ಗೆಯೂ ಮಾಹಿತಿ ಹೊಂದಿರಬೇಕು. ಪ್ರಮುಖ ವಾಗಿ ಕಾನೂನನ್ನು ಯಾವ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಬಾರದು ಎಂದರು.
ಫೋಸ್ಕೋ ಕಾಯ್ದೆ ಮಹಿಳೆಯರು, ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯುವುದಾಗಿದೆ. ಈ ಕಾಯ್ದೆ ಅತ್ಯಂತ ಬಲಿಷ್ಠವಾಗಿದ್ದು, ಆರೋ ಪಿಗಳಿಗೆ ಯಾವ ರೀತಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಬಿ. ಮಹಾಲಕ್ಷೀ ವಕೀಲ ಬಿ. ಶರತ್ ಸೇರಿದಂತೆ ಇತರರು ಇದ್ದರು.