ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ ಕಲಾವಿದೆ ಸ್ನೇಹಾ ಪಿ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ  ದಾಖಲೆ ನಿರ್ಮಿಸಿದ ಕಲಾವಿದೆ ಸ್ನೇಹಾ ಪಿ.

ಕಲೆಯ ಗಂಧ ಅರಿತವರಿಗೆ ಅವರ ಕೈಯಲ್ಲಿ ಏನೇ ವಸ್ತು ನೀಡಿದರೂ ಸುಂದರ ಕಲಾಕೃತಿಯನ್ನು ನಿರ್ಮಿಸುವ ಚಾಕಚಕ್ಯತೆಯನ್ನು ಹೊಂದಿರುತ್ತಾರೆ.  ಅಂತಹ ಒಬ್ಬ ಕಲಾವಿದೆ ನಮ್ಮ ನಿಮ್ಮ ನಡುವೆ ಎಲೆಮರೆ ಕಾಯಿಯಂತೆ ಇದ್ದು, ತನ್ನ ಪಾಡಿಗೆ ತಾನು ಕಲಾಸೇವೆ ಮಾಡುತ್ತಾ ಬಂದಿದ್ದು, `ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2024′ ರಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಹೌದು ದಾವಣಗೆರೆ ವಿದ್ಯಾನಗರ ವಾಸಿಗಳಾದ ಲಕ್ಷ್ಮಿ ಪ್ರಕಾಶ್ ಮತ್ತು ಪಿ. ಪ್ರಕಾಶ್ (ಪತ್ರಿಕಾ ವಿತರಕರು) ದಂಪತಿ ಪುತ್ರಿ ಸ್ನೇಹಾ ಪಿ. ಇಂಜಿನಿಯರಿಂಗ್ ಮಾಡಿದ್ದಾರೆ. ಸ್ನೇಹಾ, ವೃತ್ತಿಯ ಜೊತೆಗೆ ಉಳಿದ ಸಮಯವನ್ನು ವ್ಯರ್ಥ ಮಾಡದೆ ಪ್ರವೃತ್ತಿಯಾಗಿ  ಪೆನ್ಸಿಲ್ ಸ್ಕೆಚ್, ಪೇಂಟಿಂಗ್, ಸ್ಟ್ರಿಂಗ್‌ ಆರ್ಟ್, (ನೂಲು ಚಿತ್ರ)  ಪಿಕ್ಸೆಲ್ ಆರ್ಟ್, ರೆಸಿನ್ ಆರ್ಟ್, ಹೀಗೆ ಬಗೆಬಗೆಯ ಕಲಾಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ.

ಅದರಲ್ಲಿ ಪ್ರಮುಖವಾಗಿ ಕನ್ನಡದ ಖ್ಯಾತ ಚಿತ್ರನಟ ದಿವಂಗತ ಚಿರಂಜೀವಿ ಸರ್ಜಾ ಜನ್ಮದಿನ ನಿಮಿತ್ತ ಸತತ 14 ಗಂಟೆಗಳ ಕಾಲ ಪರಿಶ್ರಮ ವಹಿಸಿ, ಮರದ ಹಲಗೆಯ ಮೇಲೆ 250 ಮೊಳೆಗಳನ್ನು ವೃತ್ತಾಕಾರದಲ್ಲಿ ಹೊಡೆದು, ಅವುಗಳನ್ನು ಆಧಾರವಾಗಿಟ್ಟುಕೊಂಡು, ಸುಮಾರು 4 ಕಿ.ಮೀ. ಉದ್ದದ ದಾರದಿಂದ ಅವರ ಭಾವಚಿತ್ರವನ್ನು ನಿರ್ಮಿಸಿದ್ದರು. ನಂತರ ಅದನ್ನು ಚಿರಂಜೀವಿ ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಅವರಿಗೆ ಅರ್ಪಿಸಲಾಯಿತು. ಈ ಕುರಿತಾದ ಲೇಖನ ಸ್ಥಳೀಯ ಜನತಾವಾಣಿ ಪತ್ರಿಕೆ ಸೇರಿದಂತೆ ಮತ್ತಿತರೆ ಪತ್ರಿಕೆಗಳಲ್ಲಿ’ ದಾರದಲ್ಲಿ ಅರಳಿದ ಚಿರಂಜೀವಿ ಸರ್ಜಾ ಕಲಾಕೃತಿ’ಎಂಬ ಶಿರೋನಾಮೆಯೊಂದಿಗೆ ಪ್ರಕಟ ಮಾಡಲಾಗಿತ್ತು.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ ಕಲಾವಿದೆ ಸ್ನೇಹಾ ಪಿ. - Janathavani

ಇದೇ ರೀತಿ ನಮ್ಮನ್ನಗಲಿದ ಡಾ. ಪುನೀತ್ ರಾಜಕುಮಾರ್ ಅಂದರೆ  ಪ್ರೀತಿಯ ಅಪ್ಪು ನೆನಪಿಗಾಗಿ ಸಹ ಸ್ಟ್ರಿಂಗ್ ಆರ್ಟ್ ಮಾಡಿ ಅಪ್ಪಟ ಅಪ್ಪು ಅಭಿಮಾನಿ ಆಗಿರುವಂತಹ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ  ನೀಡಿದ್ದರು. 

ಈಗ ಅದೇ ರೀತಿಯ ಮತ್ತೊಂದು ವಿಭಿನ್ನ ಪ್ರಯತ್ನದೊಂದಿಗೆ,  ಪಿಕ್ಸಲ್ ಆರ್ಟ್  ಎಂಬ ಕಲೆಯಲ್ಲಿ ಸುಮಾರು 25 ಗ್ರಾಫ್‌ ಶೀಟ್‌ಗಳನ್ನು ಬಳಸಿ, 8 ದಿನಗಳ ಕಾಲ ಶ್ರಮವಹಿಸಿ, 3.93 x 2.95 ಅಡಿಗಳ ಅಳತೆಯಲ್ಲಿ `ದಿ. ಪುನೀತ್ ರಾಜ್ ಕುಮಾರ್’ ಅವರ ಭಾವಚಿತ್ರ ರಚಿಸಿರುತ್ತಾರೆ.

ಈ ಚಿತ್ರದ ಮೂಲಕ ಹರಿಯಾಣ ರಾಜ್ಯದ ಫರಿದಾಬಾದ್ ನಗರದ `ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್ಸ್ 2024′ ನೇ ಸಾಲಿನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಈ ಕಲಾಕೃತಿಯನ್ನು  `ಲಾರ್ಜೆಸ್ಟ್ ಪಿಕ್ಸೆಲ್ ಆರ್ಟ್ ಪೋರ್ಟ್ರೇಟ್’ ಎಂದು ಪ್ರೋತ್ಸಾಹಿಸಿ, ಉತ್ತಮ ಪ್ರಶಂಸೆಯೊಂದಿಗೆ ಪ್ರಶಸ್ತಿ ಪ್ರಮಾಣ ಪತ್ರ, ಪದಕ ಹಾಗೂ ರೆಕಾರ್ಡ್ ಬುಕ್ ನೀಡಲಾಗಿದೆ.

error: Content is protected !!