ಎಂಟು ಪ್ರಕರಣಗಳಲ್ಲಿ 62.83 ಲಕ್ಷ ರೂ.ಗಳ ವಂಚನೆ
ದಾವಣಗೆರೆ, ನ. 14 – ಮದುವೆ ಹಾಗೂ ಉದ್ಯೋಗದ ಆಮಿಷ ಒಡ್ಡಿ ವಂಚನೆ ಮಾಡಿದ್ದ ಮಂಡ್ಯದ ಎಂ. ಮಧು ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮದುವೆ ಮಾಡಿಕೊಳ್ಳುವುದಾಗಿ ಹಾಗೂ ನೌಕರಿ ಕೊಡಿಸುವುದಾಗಿ ಈತ ಎಂಟು ಪ್ರಕರಣಗಳಲ್ಲಿ ಒಟ್ಟು 62.83 ಲಕ್ಷ ರೂ.ಗಳ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡ ಮ್ಯಾಟ್ರಿಮೋನಿಯಲ್ ಆಪ್ ಒಂದರ ಮೂಲಕ ಈ ವ್ಯಕ್ತಿಯು ನಗರದ ಮಹಿಳೆಯೊಬ್ಬರನ್ನು ಸಂಪರ್ಕಿಸಿ, ಮದುವೆ ಆಗಲು ಒಪ್ಪಿರುವುದಾಗಿ ಹೇಳಿದ್ದ. ನಂತರ ವಾಟ್ಸ್‌ಆಪ್ ಮೂಲಕ ಸಂಪರ್ಕ ಬೆಳೆಸಿದ್ದ. ನಾನು ರೈಲ್ವೆ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದು, ಮಹಿಳೆಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ. ನಂತರ ಮಹಿಳೆಯಿಂದ 21 ಲಕ್ಷ ರೂ.ಗಳನ್ನು ಆನ್‌ಲೈನ್ ಮೂಲಕ ಪಡೆದಿದ್ದ. ಈ ಬಗ್ಗೆ ಕಳೆದ ಜೂನ್ 24ರಂದು ಪೊಲೀಸರಲ್ಲಿ ದೂರು ದಾಖಲಿಸಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಮಂಡ್ಯ ಜಿಲ್ಲೆಯ ಮಾಚಹಳ್ಳಿ ಗ್ರಾಮದ ಮಾಧು ಅಲಿಯಾಸ್ ಎಂ. ಮಧು ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ 4 ಲಕ್ಷ ರೂ.ಗಳನ್ನು ವಶಪಡಿಸಿಕೊಂಡು ಪಿರ್ಯಾದುದಾರರಿಗೆ ಮರು ಪಾವತಿ ಮಾಡಲಾಗಿದೆ.
ಈತ ಮದುವೆ ವಿಷಯದಲ್ಲಿ ಮೂವರು ಹೆಣ್ಣು ಮಕ್ಕಳಿಗೆ ನಂಬಿಸಿ, ಮೋಸ ಮಾಡಿರುವ ಬಗ್ಗೆ ಚಿಕ್ಕಮಗಳೂರು, ಮಂಡ್ಯ ಹಾಗೂ ದಾವಣಗೆರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಿಂದ ಕಂಡು ಬಂದಿದೆ. ಅಲ್ಲದೇ, ನೌಕರಿ ಕೊಡಿಸುವುದಾಗಿ ವಂಚಿಸಿದ ಬಗ್ಗೆ ದಾವಣಗೆರೆ, ಹರಿಹರ, ಬೆಂಗಳೂರು, ಮೈಸೂರು ಹಾಗೂ ಕೆ.ಆರ್. ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.