ಭತ್ತ ಪಡೆದು 1.83 ಕೋಟಿ ರೂ. ವಂಚನೆ : ಬಂಧನ

ದಾವಣಗೆರೆ, ನ. 14 – ಭತ್ತ ಪಡೆದು ಹಣ ನೀಡದೇ ರೈತರು ಹಾಗೂ ದಲ್ಲಾಳಿ ವರ್ತಕರಿಗೆ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ನಗರದ ವಿ. ಶ್ರೀನಿವಾಸ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದ ಎ. ನರಸಯ್ಯ ಎಂಬುವವರು ಭತ್ತದ ಬ್ರೋಕರ್ ಕೆಲಸ ಮಾಡುತ್ತಿದ್ದರು. ಇವರ ಸಂಪರ್ಕ ಬೆಳೆಸಿದ್ದ ಆರೋಪಿ, ನನ್ನ ಭತ್ತದ ಮಿಲ್ ಇದೆ. ನನಗೆ ಭತ್ತ ಕಳಿಸಿದರೆ ಹೆಚ್ಚಿನ ದರ ನೀಡುವುದಾಗಿ ತಿಳಿಸಿದ್ದ.

ಇದನ್ನು ನಂಬಿ 2.58 ಕೋಟಿ ರೂ. ಮೌಲ್ಯದ 40 ಲೋಡ್ ಭತ್ತವನ್ನು 28.04.2023ರಿಂದ 21.05.2023ರ ಅವಧಿಯಲ್ಲಿ ಕಳಿಸಲಾಗಿತ್ತು. ಮೊದಲ 15 ಲೋಡ್ ಭತ್ತದ ಹಣಕ್ಕೆ 75 ಲಕ್ಷ ರೂ.ಗಳನ್ನು ನೀಡಲಾಗಿತ್ತು. ಇದನ್ನು ನಂಬಿ ನರಸಯ್ಯ ಅವರು 25 ಲೋಡ್ ಭತ್ತವನ್ನು ನೆರೆ ಹೊರೆಯ ರೈತರಿಂದ ಪಡೆದು ಶ್ರೀನಿವಾಸಗೆ ಕಳಿಸಿದ್ದರು. ಆದರೆ, ಉಳಿದ 1.83 ಕೋಟಿ ರೂ. ನೀಡದೇ ಸಬೂಬು ಹೇಳಲಾಗಿದೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ಆರ್.ಎಂ.ಸಿ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ನಂತರ ಪ್ರಕರಣವನ್ನು ಸಿ.ಎನ್.ಎನ್. ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ಆರೋಪಿ ವಂಚನೆ ಮಾಡಿರುವ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ, ಹದಡಿ ಪೊಲೀಸ್ ಠಾಣೆ, ಬಸವನಗರ ಪೊಲೀಸ್ ಠಾಣೆ ಹಾಗೂ ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಸತ್ಯವೇಡು ಪೊಲೀಸ್ ಠಾಣೆಗಳಲ್ಲೂ ದೂರುಗಳು ದಾಖಲಾಗಿದ್ದವು.

ಈ ಹಿನ್ನೆಲೆಯಲ್ಲಿ ಕ್ರಮ ತೆಗೆದು ಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ರೈತರ ಭತ್ತ ಪಡೆದು ಹಣ ಕೊಡದ ಬಗ್ಗೆ ಇನ್ನೂ ಹಲವು ದೂರುಗಳು ದಾಖಲಾಗಿರುವ ಶಂಕೆ ಇದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!