ಲಾಭದ ಆಮಿಷ, ಸುಳ್ಳು ದಾಖಲೆ ಸೃಷ್ಟಿಸಿ ವಂಚನೆ : 6 ವರ್ಷ ಜೈಲು

ದಾವಣಗೆರೆ, ನ. 14 – ಹೆಚ್ಚಿನ ಲಾಭ ನೀಡುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿ ವಂಚನೆ ಮಾಡಿದ ಆರೋಪಿಗೆ 6 ವರ್ಷ ಶಿಕ್ಷೆ ಹಾಗೂ 45 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ.

ಹಿಂದೂಸ್ತಾನ್ ಯುನಿಲಿವರ್ ಸಂಸ್ಥೆಯಲ್ಲಿ ಹಣ ತೊಡಗಿಸಿದರೆ ಲಾಭಾಂಶ ನೀಡುವುದಾಗಿ ಹೇಳಿ 10.20 ಲಕ್ಷ ರೂ ತೊಡಗಿಸಿ ಮೋಸ ಮಾಡಲಾಗಿದೆ ಎಂದು ಸುನೀಲ್ ಅಹಮದ್ ಎಂಬುವವರು 2017ರ ನವೆಂಬರ್ 29ರಂದು ದೂರು ನೀಡಿದ್ದರು.

ಭಗತ್ ಸಿಂಗ್ ನಗರದ ನಿವಾಸಿ ಮಾಲತೇಶ್ ಎಂ.ಬಿ. ಬಾರಿಕರ್, ಉಷಾ ಮಾಲತೇಶ್ ಹಾಗೂ ಎಂ.ಜಿ. ಚೌಹಾಣ್ ಅವರು ವಂಚಿಸಿರುವುದಾಗಿ ದೂರಿನಲ್ಲಿ ಹೇಳಲಾಗಿತ್ತು.

ಮಾಲತೇಶ್‌ಗೆ ನಗರದ ಮೂರನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಎನ್.ಕೆ. ಸಿದ್ದರಾಜು ಅವರು ಎರಡು ಪ್ರಕರಣಗಳಲ್ಲಿ ತಲಾ ಮೂರು ವರ್ಷಗಳಂತೆ ಒಟ್ಟು ಆರು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಪಿರ್ಯಾದಿಗಳ ಪರವಾಗಿ ಸರ್ಕಾರಿ ವಕೀಲ ಬಿ.ಡಿ. ಚಿತ್ರಶೇಖರಪ್ಪ ಅವರು ವಾದ ಮಂಡನೆ ಮಾಡಿದ್ದರು. ಪ್ರಕರಣದಲ್ಲಿ ಕೆ.ಟಿ.ಜೆ. ನಗರದ ಪೊಲೀಸ್ ಉಪ ನಿರೀಕ್ಷಕ ಪ್ರಭು ಡಿ. ಕೆಳಗಿನಮನಿ ಅವರು ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

error: Content is protected !!