ದಾವಣಗೆರೆ, ನ. 12- ತಾಲ್ಲೂಕಿನ ಕೋಲ್ಕುಂಟೆ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಕಾಲೇಜು ವಿದ್ಯಾರ್ಥಿನಿಯರು ಮಂಗಳವಾರ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಮನವಿ ಮಾಡಿದರು.
ನಗರದ ಜಯದೇವ ವೃತ್ತದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಅವರನ್ನು ಭೇಟಿ ಮಾಡಿದ ವಿದ್ಯಾರ್ಥಿನಿಯರು, ದಾವಣಗೆರೆಯಲ್ಲಿ ಇರುವ ಕಾಲೇಜುಗಳಿಗೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಹೋಗುತ್ತೇವೆ, ಬರುತ್ತೇವೆ. ಬಸ್ ಸೌಲಭ್ಯ ಇಲ್ಲದೇ ಆಟೋಗಳಲ್ಲಿ ಬರಬೇಕಾಗಿದೆ. ಸರಿಯಾದ ಸಮಯಕ್ಕೆ ಬಾರದೇ ಪ್ರತಿನಿತ್ಯ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದೇವೆ. ಆಟೋಗಳಿಗೆ ಪ್ರತಿದಿನ ಹಣ ಕೊಡಲು ನಮ್ಮ ಪೋಷಕರಿಗೆ ಆಗುತ್ತಿಲ್ಲ. ನಮ್ಮ ತಂದೆ-ತಾಯಿಗಳು ಕೂಲಿ ಮಾಡಿ ಓದಿಸುತ್ತಾರೆ ಎಂದು ವಿದ್ಯಾರ್ಥಿನಿಯರು ಶಾಸಕರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿದರು.
ವಿದ್ಯಾರ್ಥಿನಿಯರ ಸಮಸ್ಯೆಗೆ ಸ್ಪಂದಿಸಿದ ಶಾಸಕ ಬಸವಂತಪ್ಪ, ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೋಲ್ಕುಂಟೆ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕೆಂದು ಸೂಚನೆ ನೀಡಿದರು. ಈ ವೇಳೆ ವಿದ್ಯಾರ್ಥಿಗಳು ಸಂತಸ ವ್ಯಕ್ತ ಪಡಿಸಿ, ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.