ಸದೃಢ, ಸ್ವಾಸ್ಥ್ಯ ದೇಶಕ್ಕಾಗಿ ತಂಬಾಕು ಮುಕ್ತರಾಗಿ

ಸದೃಢ, ಸ್ವಾಸ್ಥ್ಯ ದೇಶಕ್ಕಾಗಿ ತಂಬಾಕು ಮುಕ್ತರಾಗಿ

ತಂಬಾಕು ಮುಕ್ತ ಯುವ ಅಭಿಯಾನದ ಕಾರ್ಯಕ್ರಮದಲ್ಲಿ ನ್ಯಾ. ಮಹಾವೀರ ಮ. ಕರೆಣ್ಣವರ

ದಾವಣಗೆರೆ, ನ.11- ಸದೃಢ ಹಾಗೂ ಸ್ವಾಸ್ಥ್ಯ ದೇಶಕ್ಕಾಗಿ ನಾವೆಲ್ಲರೂ ಜಾಗೃತಿ ವಹಿಸಿ ತಂಬಾಕು ಮುಕ್ತರಾಗೋಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ `ತಂಬಾಕು ಮುಕ್ತ ಯುವ ಅಭಿಯಾನ’ದ ಅಂಗವಾಗಿ  ಸಮುದಾಯ ಆರೋಗ್ಯಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವಕರು ಕೆಟ್ಟ ಸ್ನೇಹಿತರ ಸಹವಾಸದಿಂದ ದುಶ್ಚಟಕ್ಕೆ ಬಲಿಯಾಗುವ ಜತೆಗೆ, ಇನ್ನಿತರೆ ದುರಭ್ಯಾಸಗಳಿಗೆ  ತಮ್ಮ ಬದುಕನ್ನೇ ನಾಶ ಪಡಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೋಟ್ಪಾ-2003ರ ಕಾಯ್ದೆಯ ಅನುಷ್ಠಾನ ಮತ್ತು ‘ತಂಬಾಕು ಮುಕ್ತ ಯುವ ಅಭಿಯಾನ 2.0’ ಮಾರ್ಗದರ್ಶನದ ಅನುಸಾರ ಜಿಲ್ಲೆಯಲ್ಲಿ ತಂಬಾಕು ಮುಕ್ತ ಗ್ರಾಮ ಮಾಡುವ ನಿಟ್ಟಿನಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು, ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪೋಷಕರು ತಮ್ಮ ಮಕ್ಕಳ ಬಳಿ ತಂಬಾಕು ಪದಾರ್ಥಗಳನ್ನು ತರಿಸುವುದರಿಂದ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.

ಪ್ರತಿ ದಿನಕ್ಕೆ 293 ಹದಿ-ಹರೆಯದ ಮಕ್ಕಳು ಹೊಸದಾಗಿ ತಂಬಾಕು ಸೇವಿಸಲು ಪ್ರಾರಂಭಿಸುತ್ತಿರುವುದು ವಿಷಾದನೀಯ. ಹಾಗಾಗಿ ಯುವಕರಿಗೆ, ಪೋಷಕರಿಗೆ ಹಾಗೂ ಸಮುದಾಯಕ್ಕೆ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಜರುಗಬೇಕು ಎಂದು ಕರೆ ನೀಡಿದರು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್‌. ಷಣ್ಮುಖಪ್ಪ, ಬಾಪೂಜಿ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸಿ.ಶುಭ, ಡಾ.ಜಿ.ವಿ.ಉಷಾ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಸತೀಶ್ ಕಲಹಾಳ್, ಶೈಲಾ ಶಾಮನೂರು ಮತ್ತು ಜಿಲ್ಲೆಯ ಸಮುದಾಯ ಆರೋಗ್ಯಾಧಿಕಾರಿಗಳಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

error: Content is protected !!