ಜಿಎಂ ವಿವಿ ಬಿಸಿಎ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ತರಬೇತಿ ಕಾರ್ಯಕ್ರಮದಲ್ಲಿ ತೇಜಸ್ವಿ ಕಟ್ಟಿಮನಿ
ದಾವಣಗೆರೆ, ನ.8- ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕದ ಜೊತೆಗೆ ಬುದ್ಧಿಮತ್ತೆ ಮತ್ತು ಕೌಶಲ್ಯ ಮುಖ್ಯ. ಕೌಶಲ್ಯ ಹೊಂದಿದ ವಿದ್ಯಾರ್ಥಿಗಳಿಗೆ ಐಟಿ ಕಂಪನಿಗಳಲ್ಲಿ ಉದ್ಯೋಗದ ಅವಕಾಶವೂ ಹೆಚ್ಚಿನದಾಗಿ ಸಿಗಲಿದೆ ಎಂದು ಜಿಎಂ ವಿಶ್ವವಿದ್ಯಾನಿಲಯದ ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ. ಆರ್. ತೇಜಸ್ವಿ ಕಟ್ಟಿಮನಿ ಹೇಳಿದರು.
ಜಿಎಂ ವಿವಿಯ ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿ ಗಳಿಗೆ ಉದ್ಯೋಗಾವಕಾಶದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೇ 11ರ ಸೋಮವಾರದಿಂದ ಒಂದೂವರೆ ತಿಂಗಳ ಕಾಲ, ವಾರದಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಪ್ರತಿದಿನ 3 ತಾಸು ನಡೆಯಲಿದೆ ಎಂದು ತಿಳಿಸಿದರು. ಬಿಸಿಎ ಅಂತಿಮ ವರ್ಷದ 108 ವಿದ್ಯಾರ್ಥಿಗಳ ಪೈಕಿ 30 ಆಸಕ್ತಿಯುಳ್ಳ, ಅರ್ಹರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುವುದು. ಇಂತಹ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶ ಕಲ್ಪಿಸುವ ಹೊಣೆ ನಮ್ಮದು ಎಂದು ಹೇಳಿದರು.
ಎಂಸಿಎ ವಿಭಾಗದ ಮುಖ್ಯಸ್ಥ ರಾಜಶೇಖರ್ ಮಾತನಾಡಿ, ಕಲಿಕೆಯಲ್ಲಿ ಇರುವಾಗಲೇ ಮುಂಚಿತವಾಗಿಯೇ ಹೀಗೆ ಉದ್ಯೋಗವನ್ನು ಪಡೆಯುವ ಮತ್ತು ಅದಕ್ಕೆ ತಕ್ಕಂತೆ ತರಬೇತಿ ನೀಡುವ ಅವಕಾಶ ಪದೇ ಪದೇ ಸಿಗುವುದಿಲ್ಲ. ಈ ಅವಕಾಶ ಸದುಪಯೋಗ ಮಾಡಿಕೊಂಡು ಬದುಕು ಕಟ್ಟಿಕೊಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಎಂ ಹಾಲಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ವೇತ ಮರಿಗೌಡರ್, ಪ್ಲೇಸ್ಮೆಂಟ್ ಕೋ ಆರ್ಡಿನೇಟರ್ ಪ್ರಮೋದ್, ತರಬೇತು ದಾರ ವಿಜಯ್ ಕುಮಾರ್ ಸೇರಿದಂತೆ ಇತರರು ಇದ್ದರು.