ಆಯೋಗಕ್ಕೆ ನಾಳೆಯೇ ನ್ಯಾಯಮೂರ್ತಿ ನೇಮಕ ಮಾದಿಗ ಸಮುದಾಯಕ್ಕೆ ಬೇಕಿಲ್ಲ ಆತಂಕ

ಆಯೋಗಕ್ಕೆ ನಾಳೆಯೇ ನ್ಯಾಯಮೂರ್ತಿ ನೇಮಕ ಮಾದಿಗ ಸಮುದಾಯಕ್ಕೆ ಬೇಕಿಲ್ಲ ಆತಂಕ

ಚಿತ್ರದುರ್ಗ, ನ.7- ಆಂಜನೇಯ ನೀನ್ಯಾಕೆ ಚಿಂತೆ ಮಾಡ್ತಯಾ, ನನ್ನ ಮೇಲೆ ನಂಬಿಕೆ ಇಲ್ವಾ, ನನಗೆ ರಾಜಕಾರಣಕ್ಕಿಂತಲೂ ಸಾಮಾಜಿಕ ನ್ಯಾಯ ಮುಖ್ಯ. ನಿನಗೆ ಗೊತ್ತು ತಾನೇ? ಒಳಮೀಸಲಾತಿ ಜಾರಿಗೊಳಿಸಿಯೇ ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಸಂಡೂರು ವಿಧಾನಸಭಾ ಕ್ಷೇತ್ರದ ಚೋರ ನೂರು ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ವಿಷಯ ಪ್ರಸ್ತಾ ಪಿಸಿದ ಸಂದರ್ಭ ಸಿಎಂ ಸಿದ್ದರಾಮಯ್ಯ ನನ್ನೊಂದಿಗೆ ಚರ್ಚೆ ನಡೆಸಿದ ವೇಳೆ ಈ ಭರವಸೆ ನೀಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದಿಜಾಂಬವ ಸಮುದಾಯಕ್ಕೆ ಆತಂಕ ಬೇಕಿಲ್ಲ. ನಿನಗೂ ಅಷ್ಟೇ. ಒಳಮೀಸಲಾತಿ ಜಾರಿಗೊಳಿಸುವುದು ನನ್ನ ಬದ್ಧತೆ ಆಗಿದೆ. ಆದ್ದರಿಂದಲೇ ಒಳಮೀಸಲಾತಿ ಜಾರಿಗೊಳಿಸಿದ ಸಂದರ್ಭ ಯಾವುದೇ ರೀತಿ ಕಾನೂನು ತೊಡಕು ಆಗದ ರೀತಿ ಎಚ್ಚರಿಕೆ ಹೆಜ್ಜೆ ಇಡಲು ದಿಟ್ಟ ಕ್ರಮಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಆದ್ದರಿಂದಲೇ ದತ್ತಾಂಶ ಪಡೆಯಲು ಆಯೋಗ ರಚಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಆಯೋಗಕ್ಕೆ ನ್ಯಾಯಮೂರ್ತಿ ನೇಮಕ ವಿಳಂಬ ಆಗಿಲ್ಲ. ನಾಳೆಯೇ ನ್ಯಾಯಮೂರ್ತಿಯೊಬ್ಬರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡುವೆ. ಈ ವಿಷಯದಲ್ಲಿ ಯಾಕಪ್ಪಾ ನಿನಗೆ ಆತಂಕ ಎಂದು ಪ್ರಶ್ನಿಸಿದರು ಎಂದು ಆಂಜನೇಯ ತಿಳಿಸಿದ್ದಾರೆ.

ಎಸ್‍ಸಿಎಸ್‍ಪಿ, ಟಿಎಸ್‍ಪಿ ಕಾಯ್ದೆ ಜಾರಿಗೆ ತಂದಿದ್ದು, ಕಾಮಗಾರಿ ಗುತ್ತಿಗೆಯಲ್ಲಿ ಎಸ್ಸಿ, ಎಸ್ಟಿಗೆ ಮೀಸಲಾತಿ ಜಾರಿಗೊಳಿಸಿದ್ದು ಯಾರು? ನಾನೇ ತಾನೇ. ಅದೇ ರೀತಿ ಒಳಮೀಸಲಾತಿಯನ್ನು ನಾನೇ ಜಾರಿಗೊಳಿಸುವೆ ಎಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಾಜಕೀಯ ಕಾರಣಕ್ಕೆ, ಚುನಾವಣೆಯಲ್ಲಿ ಮತ ಗಳಿಕೆಗಾಗಿ ವಿಪಕ್ಷದವರು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಾರೆ. ಅದಕ್ಕೆಲ್ಲ ಗಮನ ಕೊಡುವುದು ಬೇಡ. ನನ್ನ ಮತ್ತು ಕಾಂಗ್ರೆಸ್ ಆಡಳಿತದಲ್ಲಿ ಅಹಿಂದ ವರ್ಗಕ್ಕೆ ಸದಾ ಒಳಿತನ್ನೇ ಮಾಡಲಾಗಿದೆ. ಮುಂದೆಯೂ ಮಾಡುತ್ತೇವೆ. ಎಂತಹ ಷಡ್ಯಂತ್ರ ನಡೆಸಿದರೂ ನಾನು ಹಾಗೂ ನನ್ನ ಕಾಂಗ್ರೆಸ್ ಪಕ್ಷ ನೊಂದ ಜನರ ಪರ ಕಾನೂನು, ಯೋಜನೆ ರೂಪಿಸುವಲ್ಲಿ ಹೆಜ್ಜೆ ಹಿಂದಿಡುವುದಿಲ್ಲ. ಈಗಾಗಲೇ ಉದ್ಯೋಗ ನೇಮಕಾತಿಗೆ ತಡೆ ಹಾಕಿದ್ದೇವೆ. ಅದರರ್ಥ ನಾವು ಒಳಮೀಸಲಾತಿಯನ್ನು ಶೀಘ್ರ ಜಾರಿಗೊಳಿಸುವ ಬದ್ಧತೆ ಹೊಂದಿದ್ದೇವೆ ಎಂದರ್ಥ ಎಂದು ಚರ್ಚೆ ವೇಳೆ ಸಿದ್ದರಾಮಯ್ಯ ಅಭಯ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

error: Content is protected !!