ದಾವಣಗೆರೆ, ನ.7- ಶ್ರೀರಾಮ ಸೇನೆ ವತಿಯಿಂದ ಇದೇ ದಿನಾಂಕ 10 ರಂದು ಚಿಕ್ಕಮಗಳೂರು ಸಮೀಪದಲ್ಲಿರುವ ಚಂದ್ರದ್ರೋಣ ಪರ್ವತದ ದತ್ತಪೀಠದಲ್ಲಿ ಶ್ರೀ ಸತ್ಯ ದತ್ತ ವ್ರತ, ಶ್ರೀ ದತ್ತ ಹೋಮ ಹಾಗೂ ದತ್ತಮಾಲ ಅಭಿಯಾನ-2024 ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಪರಶುರಾಮ ನಡುಮನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ 10.30 ಕ್ಕೆ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಯಲಿದ್ದು, ನಂತರ ಧಾರ್ಮಿಕ ಸಭೆ ಹಮ್ಮಿಕೊಳ್ಳಲಾಗಿದೆ. ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀಕ್ಷೇತ್ರ ಗಾಣಗಾಪುರದ ಶ್ರೀ ವಿವೇಕ ಚಿಂತಾಮಣಿ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದು, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪಾಲ್ಗೊಳ್ಳಿದ್ದಾರೆಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ತೆಲಂಗಾಣದ ಪ್ರಖರ ವಾಗ್ಮಿ ಮಾಧವಿ ಲತಾ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಪರಿಷತ್ ಸದಸ್ಯ ಸಿ.ಟಿ. ರವಿ, ಮಾಜಿ ಸಂಸದ ಪ್ರತಾಪ್ ಸಿಂಹ, ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ವಿಶ್ವಧರ್ಮ ರಕ್ಷಾ ಸೇವಾ ಸಂಸ್ಥಾನದ ಯೋಗಿ ಸಂಜೀತ್ ಸುವರ್ಣ, ದತ್ತಾತ್ರೇಯ ಅಲ್ಲಂ ಪುರ, ಅರ್ಚಕರಾದ ರಾಜೇಂದ್ರ ಕುಮಾರ್, ದೀಪಕ್ ದೊಡ್ಡಯ್ಯ ಭಾಗವಹಿಸಲಿದ್ದಾರೆ.
ಹಿಂದೂ ಪೀಠವನ್ನಾಗಿಸಲು ಆಗ್ರಹ: ಚಿಕ್ಕಮಗಳೂರಿನ ದತ್ತಪೀಠದಲ್ಲಿನ ಇಸ್ಲಾಮಿಕ್ ಅತಿಕ್ರಮಣದ ಮುಕ್ತಿಗಾಗಿ ಸಂಪೂರ್ಣ ಹಿಂದೂ ಪೀಠ ನಿರ್ಮಾಣ ಮಾಡಲು ಸರ್ಕಾರ ಶೀಘ್ರವೇ ಮುಂದಾಗುವಂತೆ ಪರಶುರಾಮ ನಡುಮನಿ ಆಗ್ರಹಿಸಿದರು.
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿನ ಅತ್ಯಂತ ರಮಣೀಯ ತಾಣ ದತ್ತಪೀಠವಾಗಿದ್ದು, ಇಲ್ಲಿ ಇಸ್ಲಾಮಿಕ್ ಅತಿಕ್ರಮಣದ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆದಿತ್ತು. ಇದರ ವಿರುದ್ಧ 20 ವರ್ಷಗಳಿಂದ ನಿರಂತರ ಹೋರಾಟವನ್ನು ಶ್ರೀರಾಮ ಸೇನೆ ಮಾಡುತ್ತಾ ಬಂದಿದ್ದು, ಇದಲ್ಲದೇ ರಥಯಾತ್ರೆ, ಶೋಭಾಯಾತ್ರೆ, ಧರ್ಮಸಭೆ, ಸಾಮೂಹಿಕ ದತ್ತ ಜಪ ಮುಂತಾದವುಗಳ ಮೂಲಕ ನಮ್ಮ ಹಕ್ಕನ್ನು ಪಡೆಯಲು ಪ್ರಯತ್ನಗಳು ನಡೆಯುತ್ತಲೇ ಇವೆ ಎಂದರು.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದತ್ತಪೀಠ ದಲ್ಲಿರುವ ಅನಧಿಕೃತ ಇಸ್ಲಾಮಿಕ್ ಕುರುಹು ಗಳನ್ನು ಮೂಲ ದರ್ಗಾ ನಾಗೇನಹಳ್ಳಿಗೆ ಸ್ಥಳಾಂತರ ಮಾಡಬೇಕು. ಕೇವಲ ಹಿಂದೂ ಅರ್ಚಕರು ಇರಬೇಕು. ಮೌಲ್ವಿಗಳು ನಾಗೇನಹಳ್ಳಿಗೆ ಸ್ಥಳಾಂತರಗೊಳ್ಳಬೇಕು. ಇದಲ್ಲದೇ ದತ್ತ ಭಕ್ತರಿಗೆ ಪ್ರಸಾದ ಮತ್ತು ವಸತಿ ವ್ಯವಸ್ಥೆ ಕಲ್ಪಿಸಬೇಕು. ದತ್ತಪೀಠದಲ್ಲಿ ಕಳುವಾದ ಎಲ್ಲಾ ವಸ್ತುಗಳನ್ನು ಪೀಠಕ್ಕೆ ಹಿಂತಿರುಗಿಸಬೇಕೆಂದು ಒತ್ತಾಯಿಸಿದರು.
ಗಾಣಗಾಪುರದಿಂದ ದತ್ತಪೀಠಕ್ಕೆ ದಿನ ನಿತ್ಯ ಬಸ್ ಸೇವೆ ಆರಂಭಿಸಬೇಕು. ಪೀಠದಲ್ಲಿ ನಮಾಜ್ ಹಾಗೂ ಮಾಂಸಾಹಾರ ನಿಲ್ಲಿಸಬೇಕು. ದತ್ತಪೀಠದ ಆಸ್ತಿ ಕಬಳಿಸಿದವರಿಗೆ ನೋಟಿಸ್ ನೀಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಗರ್, ಶ್ರೀಧರ್, ರಾಜು, ಪಳನಿ ಮತ್ತಿತರರು ಉಪಸ್ಥಿತರಿದ್ದರು.