ಹರಿಹರ : ಸ್ಮಶಾನಕ್ಕಾಗಿ ಭೂಮಿ ನೀಡಲು ದಲಿತರ ಒತ್ತಾಯ

ಹರಿಹರ : ಸ್ಮಶಾನಕ್ಕಾಗಿ ಭೂಮಿ ನೀಡಲು ದಲಿತರ ಒತ್ತಾಯ

ಹರಿಹರ,  ನ. 7 – ನಗರ ಸಭೆ ವ್ಯಾಪ್ತಿಯಲ್ಲಿನ ಗುತ್ತೂರು ಗ್ರಾಮದ ದಲಿತರಿಗೆ ಸ್ಮಶಾನ (ರುದ್ರ ಭೂಮಿ) ಇಲ್ಲದ ಕಾರಣ, ಮೃತ ಪಟ್ಟವರ ಶವ ಸಂಸ್ಕಾರ (ಅಂತ್ಯಕ್ರಿಯೆ) ಮಾಡಲು ಗ್ರಾಮದ ದಲಿತರು ಹಲವಾರು ತೊಂದರೆ ಅನುಭವಿಸುತ್ತಿದ್ದು, ಸ್ಮಶಾನಕ್ಕಾಗಿ ಭೂಮಿ ನೀಡಬೇಕೆಂದು ಒತ್ತಾಯಿಸಿ ಗ್ರಾಮದ ದಲಿತರು ಬುಧವಾರ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಜ್ಜಪ್ಪ ದೊಡ್ಮನಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ರುದ್ರ ಭೂಮಿಗಾಗಿ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದು, ಇಲ್ಲಿಯವರೆಗೂ ನಮಗೆ ರುದ್ರಭೂಮಿಯನ್ನು ನೀಡಿಲ್ಲ ಎಂದು ಕಿಡಿಕಾರಿದರು.  ಗುತ್ತೂರು ಗ್ರಾಮದಲ್ಲಿರುವ ದಲಿತರಾದ ನಮಗೆ ಸ್ಮಶಾನಕ್ಕೆ ಸರ್ಕಾರ ಭೂಮಿಯನ್ನು ನೀಡದಿರುವ ಕಾರಣ, ಊರ ಹತ್ತಿರದಲ್ಲಿಯೇ ಹರಿಯುತ್ತಿರುವ ತುಂಗಭದ್ರಾ ನದಿಯ ದಡದಲ್ಲಿಯೇ ಶವ ಸಂಸ್ಕಾರವನ್ನು ಮಾಡುತ್ತಾ ಬಂದಿರುತ್ತೇವೆ. 

ಮಳೆಗಾಲ ಬಂತೆಂದರೆ ಸಾಕು, ಆ ಸಮಯದಲ್ಲಿ ಸತ್ತವರ ಶವವನ್ನು ಹೆಗಲ ಮೇಲೆ ಹೊತ್ತು ಹರಿಯುವ ನದಿಯ ನೀರಿನಲ್ಲಿಯೇ, ರೈತರ ಗದ್ದೆಗಳ ಬದುವಿನಲ್ಲಿ ಏಳುತ್ತಾ-ಬೀಳುತ್ತಾ ಸಾಗಿ ನದಿಯ ದಡದಲ್ಲಿಯೇ ಶವ ಸಂಸ್ಕಾರ ಮಾಡುವ ದೃಶ್ಯ ನೋಡಿದರೆ ಎಂಥವರಿಗಾದರೂ ನೋವೆನ್ನಿಸದಿರಲಾರದು. ಆದ ಕಾರಣ ಸರ್ಕಾರದಿಂದ ಗುತ್ತೂರು ಗ್ರಾಮದ ದಲಿತರಿಗೆ ರುದ್ರ ಭೂಮಿ ನೀಡಬೇಕೆಂದು  ಆಗ್ರಹಿಸಿದರು.

ಮುಖಂಡ ಹೆಚ್.ಬಿ.ಸಿ ನಾಗರಾಜ ಮಾತನಾಡಿ, ಸಂವಿಧಾನ ದೇಶದ ದಲಿತರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿದೆ. ಆದರೆ, ಗುತ್ತೂರು ಗ್ರಾಮದಲ್ಲಿ ದಲಿತರಿಗೆ ಸ್ಮಶಾನವನ್ನು ನೀಡದಿರುವುದು ನೋವಿನ ಸಂಗತಿಯಾಗಿದೆ ಎಂದರು.  ಮನವಿ ಪತ್ರ ಸ್ವೀಕರಿಸಿದ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ ಮಾತನಾಡಿ, ಸಂವಿಧಾನ ಬದ್ದವಾಗಿ ದಲಿತರಿಗೆ ಸ್ಮಶಾನ ಭೂಮಿಯನ್ನು ನೀಡಲು ಸರ್ಕಾರಕ್ಕೆ ಪತ್ರ ಬರೆದು, ಭೂಮಿ ನೀಡಲಾಗುವುದೆಂದು ಭರವಸೆ ನೀಡಿದರು. 

ಮುಖಂಡರಾದ ಮರಿಯಪ್ಪ, ಹನುಮಂ ತಪ್ಪ, ನಿಂಗಪ್ಪ, ರಾಜಶೇಖರ, ಬಸವರಾಜಪ್ಪ, ಎಲ್.ಬಿ. ಚೌಡಪ್ಪ, ಬಿ. ಬಸವರಾಜಪ್ಪ, ಹಾಲಪ್ಪ, ಪ್ರಕಾಶ, ಪರಶುರಾಮ್, ಹೊನ್ನಪ್ಪ, ಕೆಂಚಪ್ಪ, ಅಂಜಿನಪ್ಪ, ಮಾರ್ತಾಂಡಪ್ಪ, ನಾಗಪ್ಪ, ರಾಮಪ್ಪ, ರಘು, ಮೈಲಪ್ಪ ಸೇರಿದಂತೆ ಅನೇಕರು ಇದ್ದರು.

error: Content is protected !!