ದಾವಣಗೆರೆ, ನ.6- ಎಲ್ಲರೂ ನೆಮ್ಮದಿಯಾಗಿ ಬದುಕುವಂತೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ವಕ್ಫ್ ಮಂಡಳಿ ರದ್ದು ಮಾಡುವ ಬಗ್ಗೆ ಸರ್ಕಾರ ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ವಹಿಸಲಿ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳವಾರ ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ವಕ್ಫ್ ಮಂಡಳಿ ಆಸ್ತಿಯ ಕುರಿತು ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದರೆ ಸಾಲದು. ಬದಲಿಗೆ, ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಬೇಕು. ರೈತರಲ್ಲಿ ಭಯ ಸೃಷ್ಟಿಸುವ ಕೆಲಸ ಆಗಬಾರದು.
ಹಗಲು ದರೋಡೆ ಆಗಬಾರದು. ಎಲ್ಲರೂ ನೆಮ್ಮದಿಯಾಗಿ ಬದುಕುವಂತೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ವಕ್ಫ್ ಮಂಡಳಿ ರದ್ದು ಮಾಡುವ ಬಗ್ಗೆ ಸರ್ಕಾರ ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ವಹಿಸಲಿ ಎಂದು ಅವರು ಆಗ್ರಹಿಸಿದರು.
ಅವರವರ ಆಸ್ತಿಯು ಅವರಿಗೆ ಸೇರಬೇಕು. ತಲೆತಲಾಂತರದಿಂದ ಒಬ್ಬರ ಹೆಸರಿನಲ್ಲಿ ಇದ್ದ ಆಸ್ತಿಯು ಇದ್ದಕ್ಕಿದ್ದಂತೆ ಬೇರೊಬ್ಬರಿಗೆ ಸೇರಿದ್ದು ಎನ್ನುವುದು ಸರಿಯಲ್ಲ. ಇಂತಹದ್ದೊಂದು ಕಾನೂನು ಯಾವಾಗ ಬಂತು? ಹೇಗೆ ಬಂತು? ಎಂಬ ಬಗ್ಗೆ ತನಿಖೆ ನಡೆಯಲಿ ಎಂದರು.
`ಧಾರ್ಮಿಕ ದತ್ತಿ ಇಲಾಖೆಯು ದೇವಾಲಯಗಳ ಆಸ್ತಿ ರಕ್ಷಣೆಗೆ ಮುಂದಾಗಬೇಕು. ದೇವರ ಹೆಸರಿನಲ್ಲಿರುವ ಆಸ್ತಿಗಳನ್ನು ನೋಂದಣಿ ಮಾಡುವ ಕೆಲಸವನ್ನು ಅಧಿಕಾರಿಗಳು ಅಗತ್ಯವಾಗಿ ಮಾಡಬೇಕು ಎಂದರು.