ನಂಬಿಕೆಯಿಲ್ಲದ ಸಂಬಂಧ ಜೀವನದಲ್ಲಿ ತೃಪ್ತಿ ಕೊಡದು

ನಂಬಿಕೆಯಿಲ್ಲದ ಸಂಬಂಧ ಜೀವನದಲ್ಲಿ ತೃಪ್ತಿ ಕೊಡದು

ರಂಭಾಪುರಿ ಜಗದ್ಗುರುಗಳ ಅಭಿಮತ

ಹೊಳಲ್ಕೆರೆ, ನ. 6 – ಆಧುನಿಕ ಕಾಲದಲ್ಲಿ ಮಾನವೀಯ ಸಂಬಂಧಗಳು ಕಣ್ಮರೆಯಾಗುತ್ತಿವೆ. ಸ್ವಾರ್ಥಯಿಲ್ಲದ ನಿಲುವು ಕಷ್ಟಪಡದೇ ಸಿಗುವ ಹಣ ನಂಬಿಕೆಯಿಲ್ಲದ ಸಂಬಂಧ ಎಂದೆಂದಿಗೂ ಜೀವನದಲ್ಲಿ ತೃಪ್ತಿಯನ್ನು ಕೊಡುವುದಿಲ್ಲವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ತಾಲ್ಲೂಕಿನ ಮದ್ದೇರು ಗ್ರಾಮದಲ್ಲಿ ಪುರಾತನ ಈಶ್ವರ ದೇವಸ್ಥಾನ ಮತ್ತು ಬಸವಣ್ಣ ದೇವಸ್ಥಾನದ ಉದ್ಘಾಟನೆ ಅಂಗವಾಗಿ ನಿನ್ನೆ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಭಾರತ ಧರ್ಮ ಭೂಮಿಯಲ್ಲಿ ಹಲವಾರು ಧರ್ಮಗಳು ಮತ್ತು ಸಂಪ್ರದಾಯಗಳು ಬೆಳೆದುಕೊಂಡು ಬಂದಿವೆ. ಅವೆಲ್ಲ ಧರ್ಮಗಳ ಗುರಿ ಮಾನವ ಜೀವಾತ್ಮರನ್ನು ಉದ್ಧರಿಸುವ ಗುರಿ ಹೊಂದಿವೆ. ಮನುಷ್ಯ ಜೀವನದಲ್ಲಿ ಧರ್ಮ ದೇವರು ಮತ್ತು ಗುರುವನ್ನು ಎಂದಿಗೂ ಮರೆಯಬಾರದು. ಬದುಕಿಗೆ ಭಗವಂತನ ಕೊಡುಗೆ ಅಪಾರವಾದುದು. ನಂಬಿ ನಡೆದ ಭಕ್ತನಿಗೆ ಕಲ್ಲು ಕೂಡಾ ದೇವರಾಗಿ ಕಾಣುತ್ತದೆ. ನಂಬಿಗೆ ಇಲ್ಲದವರಿಗೆ ಸಾಕ್ಷಾತ್ ದೇವರು ಪ್ರತ್ಯಕ್ಷನಾದರೂ ದೇವರ ಮಹಿಮೆ ಅರಿಯಲಾರ. ಶ್ರೀ ಜಗದ್ಗುರು ರೇಣುಕಾ ಚಾರ್ಯರು ಬದುಕಿ ಬಾಳುವ ಜೀವಾತ್ಮರಿಗೆ ಜೀವನ ದರ್ಶನದ ಹತ್ತು ಅಮೂಲ್ಯವಾದ ಧರ್ಮ ಸೂತ್ರಗಳನ್ನು ಬೋಧಿಸಿದ್ದಾರೆ. ಅವರ ಆ ವಿಚಾರ ಧಾರೆಗಳು ಅಂದಿಗಷ್ಟೇ ಅಲ್ಲ ಇಂದಿಗೂ ಅನ್ವಯಿಸುತ್ತವೆ. ಮನಸ್ಸನ್ನು ನಿಯಂತ್ರಿಸುವ ಸಾಮರ್ಥ್ಯಯಿದ್ದರೆ ಬದುಕನ್ನು ಬದಲಾಯಿಸುವ ಸಾಮರ್ಥ್ಯ ನಮ್ಮಲ್ಲಿಯೇ ಇರುತ್ತದೆ. ಸಾಧನೆಯಿಂದ ಸಂತೋಷ ಸಿಗುತ್ತದೆ ಎಂದು ಹೇಳಲಾಗದು. ಆದರೆ ಸಂತೋಷವು ಸಾಧನೆಗೆ ದಾರಿಯಾಗುತ್ತದೆ ಎನ್ನುವುದು ಸತ್ಯ  ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಧರ್ಮದ ದಿಕ್ಸೂಚಿ ಬಾಳಿಗೆ ಬಲವನ್ನು ತಂದು ಕೊಡುತ್ತದೆ. ಜೀವ ನದ ಆದರ್ಶ ಮೌಲ್ಯಗಳನ್ನು ಪರಿಪಾಲಿಸುವುದರಿಂದ ಸುಖ ಶಾಂತಿ ಪ್ರಾಪ್ತಿಯಾಗು ತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ತೋರಿದ ದಾರಿ ಕೊಟ್ಟ ಸಂದೇಶ ನಮ್ಮೆಲ್ಲರ ಬಾಳ ಬದುಕಿಗೆ ಶ್ರೇಯಸ್ಸನ್ನು ಉಂಟು ಮಾಡುತ್ತದೆ ಎಂದರು. 

ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯ ಜೀವನದಲ್ಲಿ ದೇವರು ಮತ್ತು ಮರಣ ಇದೆ ಎಂಬುದನ್ನು ಯಾರೂ ಮರೆಯಬಾರದು. ನಾವು ಮಾಡಿದ ಉಪಕಾರ ಪರರು ಮಾಡಿದ ಅಪಕಾರ ಮರೆತು ಬಾಳುವುದು ಮನಸ್ಸಿನ ನೆಮ್ಮದಿಗೆ ಕಾರಣವಾಗುತ್ತದೆ ಎಂದರು. 

ಮಳಲಿ ಸಂಸ್ಥಾನಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮ ಉದಾತ್ತ ವಾದ ಮೌಲ್ಯಗಳನ್ನು ಪ್ರತಿಪಾದಿಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಜೀವನದ ಉನ್ನತಿಗೆ ಅಡಿಪಾಯವಾಗಿವೆ. ಸತ್ಯ, ಶುದ್ಧ, ಧರ್ಮ, ಮಾರ್ಗದಲ್ಲಿ ನಡೆದು ಜೀವನದಲ್ಲಿ ಶಾಂತಿ ನೆಮ್ಮದಿ ಕಾಣಬೇಕೆಂದರು. 

ಮಾಜಿ ಶಾಸಕ ರಮೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಿದ್ದೇಶ್, ಮಾಜಿ ಜಿ.ಪಂ. ಸದಸ್ಯ ಶಿವಕುಮಾರ, ಬಿಜೆಪಿ ಧುರೀಣ ಹೊಸದುರ್ಗದ ಲಿಂಗಮೂರ್ತಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ದೇವಸ್ಥಾನ ಸಮಿತಿ ಮುಖ್ಯಸ್ಥ ರಾಜಣ್ಣ ಪ್ರಾಸ್ತಾವಿಕ ಮಾತನಾಡಿದರು. 

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಸ್ವಾಮಿ ಇವರಿಂದ ಸ್ವಾಗತ, ವಿಠಲಾಪುರ ಗಂಗಾಧರ ಹಿರೇಮಠ ಇವರಿಂದ ಪ್ರಾರ್ಥನೆ ಜರುಗಿತು. ಕುಮಾರಿ ಶ್ರೇಯ ಜಿ.ಎಂ. ಇವರಿಂದ ಭರತ ನಾಟ್ಯ ಜರುಗಿತು. ಶಿವಮೊಗ್ಗದ ಹೆಚ್. ಶಾಂತಾ ಆನಂದ ನಿರೂಪಿಸಿದರು. 

ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. 

error: Content is protected !!