ಕಾಯಕದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ

ಕಾಯಕದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ

ಸಾಣೇಹಳ್ಳಿ, ನ.6- ಜೀವನದಲ್ಲಿ ಯಶಸ್ವಿ ಯಾಗಬೇಕಾದರೆ ಕಾಯಕ ಶ್ರದ್ಧೆ, ಸದ್ಭಾವನೆ, ಇಚ್ಛಾಶಕ್ತಿ, ಸತತ ಪರಿಶ್ರಮ ಬೇಕು. ಆದರೆ ಕಾಟಾಚಾರಕ್ಕಾಗಿ, ಒತ್ತಡಕ್ಕಾಗಿ, ಭಯಕ್ಕಾಗಿ ಮಾಡಿದರೆ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಸಾಣೇಹಳ್ಳಿಯ  ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.

ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ  ಇಲ್ಲಿನ ಶಿವಕುಮಾರ ರಂಗಮಂದಿರದಲ್ಲಿ ನಿನ್ನೆ ಆಯೋಜಿಸಿದ್ದ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ನಾವೆಲ್ಲರೂ ಯಶಸ್ಸನ್ನು ಬಯಸುವವರೇ. ಜನರು ಗುರುತಿಸಬೇಕೆಂದು ಬಯಸುವುದು ಸಹಜ. ಆದರೆ ಕಷ್ಟಪಡಬೇಕು, ನಿತ್ಯ ದುಡಿಮೆ ಮಾಡಬೇಕು. ಆಗ ಸಂಪಾದನೆ ಹಾಗೂ ಯಶಸ್ಸು ಸಾಧ್ಯ. ಇದಕ್ಕಾಗಿ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು. ಯಶಸ್ಸು ಬೇರೆಯವರ ಸಾಧನೆ ನೋಡಿ ಬರುವುದಿಲ್ಲ. ನಾವೇ ಸಾಧನೆಯ ಹೆಜ್ಜೆಗಳನ್ನಿಡ ಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.

ಕನಸುಗಳನ್ನು ಕಾಣುವುದು ಬೇರೆ, ಕಟ್ಟೋದು ಬೇರೆ. ಹಗಲು ಹೊತ್ತಿನಲ್ಲಿ ಕಂಡ ಕನಸು ನನಸಾಗ ಬೇಕಾದರೆ ನಿರಂತರ ಪ್ರಯತ್ನ ಮುಖ್ಯ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಬಹುದೊಡ್ಡ ಕನಸು ಕಂಡರು. ಶಾಲೆ ತೆರೆಯಬೇಕು, ನೂರಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕು ಎನ್ನುವ ಕನಸನ್ನು ನನಸಾಗಿಸಲು ಸತತವಾಗಿ ದುಡಿದರು.      ಸಮಾಜವನ್ನು  ಜಾಗೃತಿಗೊ ಳಿಸಬೇಕು, ಜನರನ್ನು ದುಡಿಮೆಗೆ ಹಚ್ಚಬೇಕು ಎಂದು   ರಾಜ್ಯದ ವಿವಿಧೆಡೆ ಶಾಲೆಗಳನ್ನು ತೆರೆದರು. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಲೆ ಎತ್ತುವಂತೆ ಮಾಡಿದರು ಎಂದು ವಿವರಿಸಿದರು. 

ಪತ್ರಿಕೆ ಮಾರುತ್ತಿದ್ದ ಅಬ್ದುಲ್ ಕಲಾಂ ರಾಷ್ಟ್ರಪತಿಯಾದರು. ಸತ್ಯ, ಪ್ರಾಮಾಣಿಕತೆ, ಮನೋಬಲ, ಛಲದ ಮೂಲಕ ಅದ್ಭುತ ಯಶಸ್ಸು ಸಾಧಿಸಲು ಸಾಧ್ಯ ಎಂಬುದನ್ನು ಅಬ್ದುಲ್ ಕಲಾಂ ಸಾಬೀತುಪಡಿಸಿದರು. ಅವರ ಹಾಗೆ ವಿದ್ಯಾರ್ಥಿಗಳು ಕನಸು ಕಾಣಬೇಕು. ಜೊತೆಗೆ ನನಸು ಮಾಡಿ ಕೊಳ್ಳಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಎಂ.ಯಶೋಧರಮ್ಮ ಕರಿಯಪ್ಪ `ಯಶಸ್ಸಿನ ಗುಟ್ಟು’ ಕುರಿತು ಮಾತನಾಡಿದರು. ಸಂಗೀತ ಶಿಕ್ಷಕ ಎಚ್.ಎಸ್.ನಾಗರಾಜ್ ಪ್ರಾರ್ಥಿಸಿದರು.  ಸಿ.ಆರ್.ಸೋಮ ಶೇಖರಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  

error: Content is protected !!