ನೆಹರು ಮನೆತನದವರು ಭಾರತದ ಬಹುಸಂಖ್ಯಾತ ಹಿಂದೂಗಳಿಗೆ ದ್ರೋಹ ಮಾಡುತ್ತಾ ಬಂದಿದ್ದರ ಪರಿಣಾಮ, ಅನೇಕ ಹಿಂದೂಗಳು ಪ್ರಾಣ ಕಳೆದುಕೊಂಡಿದ್ದರೂ ಕೂಡ ಹೋರಾಟದಲ್ಲಿ ಭಾಗವಹಿಸಿದವರನ್ನು ಬಿಟ್ಟು ವಿದೇಶದವರಿಗೆ ಮನ್ನಣೆ ನೀಡಿದ್ದರು. ಅವರು ಮಾಡಿದ್ದನ್ನು ಇಂದು ಸಿ.ಎಂ. ಸಿದ್ದರಾಮಯ್ಯ ಅದೇ ಹಾದಿಯಲ್ಲಿ ಸಾಗುತ್ತಾ ರಾಜ್ಯದ ಜನರ ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ.
– ಬಿ.ಪಿ. ಹರೀಶ್, ಶಾಸಕರು, ಹರಿಹರ.
ಹರಿಹರ, ನ .4- ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಡಾ ಮತ್ತು ವಾಲ್ಮೀಕಿ ಹಗರಣದಲ್ಲಿ ಸಿಲುಕಿರುವುದರಿಂದ ವಕ್ಫ್ ಮಂಡಳಿಯ ಮೂಲಕ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಹಾಗೂ ಸಾರ್ವಜನಿಕರ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಮುಂದಾಗಿದ್ದು, ಇದನ್ನು ಕೈ ಬಿಡದೇ ಹೋದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಶಾಸಕ ಬಿ.ಪಿ ಹರೀಶ್ ಎಚ್ಚರಿಸಿದರು.
ನಗರದ ಪತ್ರಿಕಾಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1974 ರಲ್ಲಿ, ಅಂದಿನ ಪ್ರಧಾನಿ ಇಂದಿರಾಗಾಂಧಿ ತಮ್ಮ ಆಡಳಿತ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಸಿಲುಕಿರುವ ಕಾರಣದಿಂದ ಮಾನಸಿಕವಾಗಿ ನೊಂದು ಮತ್ತು ಓಟ್ ಬ್ಯಾಂಕ್ ಹಿತದೃಷ್ಟಿಯಿಂದ ವಕ್ಫ್ ವಿಚಾರ ಜಾರಿಗೆ ತಂದರು. ಅದರ ಹಿನ್ನೆಲೆಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರಿಂದ, ದೇಶದ ಜನರ ನೆಮ್ಮದಿ ಹಾಳು ಮಾಡುವುದಕ್ಕೆ ಮುಂದಾಗಿದ್ದರು ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಅನೇಕ ಮುಖಂಡರು ಹಾಗೂ ಅಧಿಕಾರಿ ವರ್ಗದವರು ಸಾವಿರಾರು ಎಕರೆ ವಕ್ಫ್ ಆಸ್ತಿಯನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು, ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಇದರಿಂದಾಗಿ ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅದನ್ನು ಹದ್ದಬಸ್ತು ಮಾಡಿಸಿ ತಮ್ಮ ವಶಕ್ಕೆ ಪಡೆಯುವಂತೆ ಹೇಳಿದ್ದನ್ನು ತಿರುಚಿ, ನಾಡಿನಾದ್ಯಂತ ಇರುವ ದೇವಸ್ಥಾನ, ಮಠ – ಮಂದಿರಗಳು ಹಾಗೂ ಸಾರ್ವಜನಿಕರ ಆಸ್ತಿಯನ್ನು ವಕ್ಫ್ ಇಲಾಖೆ ಕಬಳಿಸಲಿಕ್ಕೆ ಮುಂದಾಗಿದ್ದು, ರಾಜ್ಯದ ಮಠ, ಮಂದಿರದ ಒಂದು ಇಂಚು ಆಸ್ತಿಯನ್ನು ಯಾವುದೇ ಕಾರಣಕ್ಕೂ ನಾವು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.
ದೇಶದಲ್ಲಿ ನೆಹರು ಮನೆತನದವರು ಹಿಂದೂಗಳಿಗೆ ಮಾಡಿರುವ ದ್ರೋಹದಿಂದ ಅನೇಕ ಜನರು ಭಯದಿಂದ, ಗೊಂದಲಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ಬಂದಿತ್ತು. ಆದರೆ, ದೇಶದ ಜನರು ಅದಕ್ಕೆ ಹೆಚ್ಚು ಮಾನ್ಯತೆ ಕೊಡದೇ ಇದ್ದ, ಪರಿಣಾಮವಾಗಿ ಇಂದು ಭಾರತ ಸದೃಢವಾಗುವಲ್ಲಿ ಹೆಜ್ಜೆಗಳನ್ನು ಹಾಕುತ್ತಾ ಮುನ್ನಡೆಗೆ ಬಂದಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಜನತೆಯ ಹಿತದೃಷ್ಟಿಯಿಂದ ಹಾಗೂ ವಕ್ಫ್ ಮಂಡಳಿಯಲ್ಲಿ ಆಗುತ್ತಿದ್ದ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಮಂಡಿಸಿದೆ. ಇದು ಜಂಟಿ ಪಾರ್ಲಿಮೆಂಟರಿ ಬೋರ್ಡ್ ಪರಿಶೀಲನೆಯಲ್ಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಘಟಕದ ಅಧ್ಯಕ್ಷ ಹಿಂಡಸಗಟ್ಟೆ ಲಿಂಗರಾಜ್, ನಗರಸಭೆ ಸದಸ್ಯ ಹನುಮಂತಪ್ಪ, ಮುಖಂಡರಾದ ಬಾತಿ ಚಂದ್ರಶೇಖರ್, ಪರಶುರಾಮ್ ಕಾಟ್ವೆ, ಮಹಾಂತೇಶ್ ಆದಾಪುರ, ತುಳಜಪ್ಪ ಭೂತೆ, ಹೆಚ್. ಮಂಜಾನಾಯ್ಕ್, ಸ್ವಾತಿ ಹನುಮಂತಪ್ಪ, ರವಿಕುಮಾರ್, ಸಂತೋಷ್ ಗುಡಿಮನಿ, ಮಂಜುನಾಥ್, ಗಿರೀಶ್ ಗೌಡ, ರೂಪಾ ಕಾಟ್ವೆ , ರೂಪಾ, ಸಾಕ್ಷಿ, ಸುಧಾ ಸೋಳಂಕಿ ಹಾಗೂ ಇತರರು ಹಾಜರಿದ್ದರು.