ವೇದಬ್ರಹ್ಮ ಗೋಪಾಲ ಆಚಾರ್ ಮಣ್ಣೂರ್
ದಾವಣಗೆರೆ, ನ. 3 – ‘ಧನ್ವಂ ತರತೀ ಇತೀ ಧನ್ವಂತರಿ’ – ಅಂದರೆ ಪಾಪವನ್ನು ಕಳೆಯುವವನು, ದೋಷವನ್ನು ದೂರ ಮಾಡುವವನು, ಅನಾರೋಗ್ಯವನ್ನು ಕಳೆಯುವವನು, ಆರೋಗ್ಯ ಭಾಗ್ಯವನ್ನು ಕೊಡುವವನು ಶ್ರೀ ಧನ್ವಂತರಿ ದೇವರು ಎಂದು ಹಿರಿಯ ಪ್ರವಚನಕಾರ ಗೋಪಾಲ ಆಚಾರ್ ಮಣ್ಣೂರ್ ಅಭಿಪ್ರಾಯಪಟ್ಟರು.
ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನದಲ್ಲಿ ಧನ್ವಂತರಿ ಜಯಂತಿ ಪ್ರಯುಕ್ತ ಇಂದು ಆಯೋಜಿಸಲಾಗಿದ್ದ ವಿಶೇಷ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ‘ಧನ್ವಂತರಿ ಜಯಂತಿ ಮಹತ್ವ’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಮುನಿ ಶ್ರೇಷ್ಠ ದೂರ್ವಾಸರ ಶಾಪದಿಂದ ದೇವತೆ ಗಳೆಲ್ಲರೂ ಸ್ವರ್ಗವನ್ನು ತ್ಯಜಿಸಬೇಕಾದ ಸಂದರ್ಭದಲ್ಲಿ ಅಮರತ್ವವನ್ನು ಪಡೆಯಲು ದೇವತೆಗಳು ಮತ್ತು ರಾಕ್ಷಸರು ಸೇರಿ ಕ್ಷೀರ ಸಾಗರದಲ್ಲಿ ಸಮುದ್ರ ಮಥನ ಮಾಡುವ ಕಾಲದಲ್ಲಿ ಅಮೃತ ಕಲಶವನ್ನು ಹೊತ್ತು ಧರೆಗಿಳಿದ ಮಹಾವಿಷ್ಣುವಿನ ರೂಪವೇ ಶ್ರೀ ಧನ್ವಂತರಿ ದೇವರು ಎಂದು ತಿಳಿಸುತ್ತಾ, ಈ ದಿನದ ವಿಶೇಷತೆ, ವೈಶಿಷ್ಟ್ಯತೆಗಳನ್ನು ತಿಳಿಸುತ್ತಾ, ಆರೋಗ್ಯ ಭಾಗ್ಯವನ್ನು ಪಡೆಯಲು ಪ್ರತಿನಿತ್ಯ ಒಂದು ಕಳಶದ ತುಂಬ ನೀರನ್ನು ತುಂಬಿ ತುಳಸಿ ಎಲೆಯನ್ನು ಹಾಕಿ ಎರಡೂ ಕೈ ಹಸ್ತವನ್ನು ಕಳಶದ ಮೇಲಿಟ್ಟು ಸಂಕಲ್ಪ ಮಾಡಿ ‘ಓಂ ಶ್ರೀ ಧನ್ವಂತರಿಯೇ ನಮಃ’ ಎಂಬ ಮಂತ್ರವನ್ನು ಕನಿಷ್ಠ 12 ರಿಂದ ಗರಿಷ್ಠ 108 ಬಾರಿ ಜಪಿಸುವುದು. ಇದರಿಂದ ನಮ್ಮ ಇಷ್ಟಾರ್ಥಗಳು ನೆರವೇರುವವು ಎಂದು ಸರಳ ಪೂಜಾ ವಿಧಾನವನ್ನು ತಿಳಿಸಿಕೊಟ್ಟರು.
ಗೋಪಾಲ ಆಚಾರ್ ಮಣ್ಣೂರ್ ಮಾರ್ಗದರ್ಶನ ದಲ್ಲಿ ಪೂಜಾ ಕಾರ್ಯಕ್ರಮವನ್ನು ದಂಪತಿಗಳಾದ ಭರತ್ ವಾಧೋನೆ ಮತ್ತು ಶ್ರೀಮತಿ ಸುಮಾ ವಾಧೋನೆ, ಚಿ. ಶ್ರೀಯನ್ ಅವರುಗಳು ನಡೆಸಿಕೊಟ್ಟರು. ಹೂವಿನ ಅಲಂಕಾರ ಸೇವೆಯನ್ನು ಗಣೇಶ್ ವಾಧೋನೆ ಕುಟುಂಬದವರು ಅರ್ಪಿಸಿದರು. ಶ್ರೀಮತಿ ಪೂರ್ಣಿಮಾ ವರದರಾಜ್ ಭಕ್ತಿ ಸಮರ್ಪಿಸಿದರು. ಶಂಕರ್ ಎಲ್.ಎ. ಕುಟುಂಬದವರು ಪ್ರಸಾದ ಸೇವೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ರಂಗೋಲಿ ಗೌರಮ್ಮ, ರೇಖಾ ಕಲ್ಲೇಶ್, ಶಾಂತಮ್ಮ, ಸಾವಿತ್ರಮ್ಮ, ಸಂಧ್ಯಾ, ಜ್ಯೋತಿಲಕ್ಷ್ಮಿ, ಹೆಚ್. ಸಂತೋಷ್, ಯೋಗ ವಿಜ್ಞಾನ ವಿಭಾಗದ ವಿ.ಕೆ. ರಾಹುಲ್, ಆರ್.ಜಿ. ಬೇಬಿ ಗುರುಪ್ರಿಯಾ, ಪೂಜಾ ಕಾರ್ಯದ ಯಶಸ್ಸಿಗೆ ಸಹಕರಿಸಿದರು. ಕಡೂರಿನ ಎಂ. ನಾಗೇಂದ್ರರಾವ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಜೀವನ್ ಎನ್. ಪವಾರ್, ಅಂಚೆ ಇಲಾಖೆಯ ಡಿ.ಹೆಚ್.ಎಂ. ವೇದಾವತಿ, ಮೀಸಲು ಪಡೆಯ ಎಸ್. ಚಂದ್ರ, ಯೋಗ ಸಾಧಕ ಮಹಾಂತೇಶ್ ಅವರುಗಳು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.