ದಾವಣಗೆರೆ, ನ.3- ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ಬೆಂಗಳೂರಿನ ಚಿಕ್ಕಬಾಣಾವರದ ಹುರುಳಿ ಚಿಕ್ಕನಹಳ್ಳಿಯ ಇಂಡೋಗ್ಲೋಬ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಭಾಭವನದಲ್ಲಿ ಕಳೆದ ವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾರಂಭದಲ್ಲಿ, ದಕ್ಷಿಣ ವಲಯದ ಎಲ್ಲಮ್ಮ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಸಹ ಶಿಕ್ಷಕಿ ಶ್ರೀಮತಿ ಮಂಜುಳಾ ಎಸ್. ಪಾಟೀಲ್ ಅವರಿಗೆ ಗುರುಭೂಷಣ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರಿಗೆ ಉರ್ದು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶಗುಪ್ತ ಯಾಸ್ಮಿನ್ ಹಾಗೂ ಎಲ್ಲಮ್ಮ ನಗರ ಶಾಲೆಯ ಬಡ್ತಿ ಮುಖ್ಯ ಶಿಕ್ಷಕರಾದ ಶ್ರೀಮತಿ ಇಶ್ರತ್ ಸುಲ್ತಾನ ಹಾಗೂ ಶಾಲಾ ಶಿಕ್ಷಕ ವೃಂದದವರು ಶಾಲೆಯ ಪರವಾಗಿ ಮಂಜುಳಾ ಅವರನ್ನು ಸನ್ಮಾನಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಅನೇಕ ನಾವೀನ್ಯ ಚಟುವಟಿಕೆಗಳನ್ನು ಅಳವಡಿಸಿಕೊಂಡು ಶಾಲೆಯಲ್ಲಿ ಮಕ್ಕಳಿಗೆ ವಿಶಿಷ್ಟವಾಗಿ ಬೋಧನೆ ಮಾಡುತ್ತಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಮಂಜುಳಾ ಅವರು ಸಂಗೀತ, ನಾಟಕ, ನೃತ್ಯ, ಕ್ರೀಡೆ ಹೀಗೆ ವಿವಿಧ ಕಲೆಗಳಲ್ಲಿ ಪಾರಂಗತರಾಗಿರುವ ಅವರು ರಾಜ್ಯ ಮಟ್ಟದವರೆಗೂ ಪ್ರದರ್ಶನ ನೀಡಿದ್ದಾರೆ. ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಗದಿಗೆಪ್ಪ, ಕರಿಬಸಪ್ಪ, ಸಾವಿತ್ರಿಬಾಯಿ ಫುಲೆ ಸಂಘದ ಜಿಲ್ಲಾ ಅಧ್ಯಕ್ಷರಾದ ಕಲ್ಪನಾ, ನಾಜಿಮಾ ಖಾನಂ, ಸೈರಾಬಾನು, ಶಾಯಿನ ಪರ್ವೀನ್, ಮಹಬೂಬ್ ಖಾನ್ ಮತ್ತು ಇತರರು ಉಪಸ್ಥಿತರಿದ್ದರು.