ಮಕ್ಕಳಿಗೆ ಮೊಟ್ಟೆ ಕೊಡಲು ತಾಕೀತು

ಮಕ್ಕಳಿಗೆ ಮೊಟ್ಟೆ ಕೊಡಲು ತಾಕೀತು

ದಾವಣಗೆರೆ, ನ. 3 – ‘ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ’ ಎಂಬಂತಾಗಿದೆ ಇಲ್ಲಿನ ಮಕ್ಕಳ ಸ್ಥಿತಿ. ಸರ್ಕಾರ ಪ್ರತಿ ದಿನ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ಯೋಜನೆಗೆ ಚಾಲನೆ ನೀಡಿದೆ. ಆದರೆ ಇಲ್ಲಿನ ಶಿಕ್ಷಕರು ವಾರಕ್ಕೆ ಮೂರು ದಿನ ಮೊಟ್ಟೆ ಕೊಟ್ಟು ಕೈತೊಳೆದುಕೊಳ್ಳುತ್ತಾರೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಅರಳಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಚೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಮವಸ್ತ್ರ, ಪಠ್ಯ ಪುಸ್ತಕ, ಬಿಸಿಯೂಟ, ಪ್ರತಿದಿನ ಮೊಟ್ಟೆಯನ್ನು ಸರ್ಕಾರ ಕೊಡುತ್ತಿದೆ ನಿಮಗೆ ಕೊಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದರು. 

ಸಮವಸ್ತ್ರ, ಪಠ್ಯ ಪುಸ್ತಕ ಕೊಟ್ಟಿದ್ದಾರೆ. ನಿತ್ಯ ಬಿಸಿಯೂಟವನ್ನೂ ಕೊಡುತ್ತಿದ್ದಾರೆ. ಆದರೆ ವಾರದಲ್ಲಿ ಮೂರು ದಿನ ಮೊಟ್ಟೆ ಮಾತ್ರ ಕೊಡುತ್ತಾರೆ ಎಂದು ಮಕ್ಕಳು ಶಾಸಕರ ಬಳಿ ಸಮಸ್ಯೆ ಬಿಚ್ಚಿಟ್ಟರು. ಇದರಿಂದ ಕೆಂಡಾಮಂಡಲರಾದ ಶಾಸಕರು, ‘ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬಂತಾಗಿದೆ ಎಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.   

ಗುಣಮಟ್ಟದ ಬಿಸಿಯೂಟದ ಜೊತೆಗೆ ಪ್ರತಿನಿತ್ಯ ಮಕ್ಕಳಿಗೆ ಮೊಟ್ಟೆ ಕೊಡಬೇಕು. ಯಾವುದೇ ಕಾರಣಕ್ಕೂ ವಾರದಲ್ಲಿ ಮೂರು ದಿನ ಮೊಟ್ಟೆ ಕೊಟ್ಟರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಶಾಸಕರು, ಇದೇ ರೀತಿ ಕ್ಷೇತ್ರದ ಕೆಲವು ಶಾಲೆಗಳಿಂದ ದೂರುಗಳು ಬರುತ್ತಿವೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.  

error: Content is protected !!