ಕೇವಲ ಅನುಭವದಿಂದ ಸಾಹಿತ್ಯ ರಚನೆ ಸಾಧ್ಯವೆಂಬ ಧೋರಣೆ ಸಲ್ಲದು

ಕೇವಲ ಅನುಭವದಿಂದ ಸಾಹಿತ್ಯ ರಚನೆ ಸಾಧ್ಯವೆಂಬ ಧೋರಣೆ ಸಲ್ಲದು

ದಾವಣಗೆರೆ, ನ. 3- ನಗರದ ರೋಟರಿ ಬಾಲಭವನದಲ್ಲಿ ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟಬಲ್ ಟ್ರಸ್ಟ್ ಹಾಗೂ ತಿಂಗಳ ಅಂಗಳ ಸಾಹಿತ್ಯ  ಸಾಂಸ್ಕೃತಿಕ ಬಳಗ ದಾವಣಗೆರೆ ಇವರ ವತಿಯಿಂದ ಸಾಹಿತ್ಯ-ಸಂವಾದ ಕಾರ್ಯಕ್ರಮ ನಡೆಯಿತು.

ಕೃಷಿ ವಿಜ್ಞಾನಿ ಹಾಗೂ ಸಾಹಿತಿ ಡಾ.ಕೆ.ಎನ್. ಗಣೇಶಯ್ಯ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ್ ಧಾರವಾಡ ಇವರು ಸಾಹಿತ್ಯಾಸಕ್ತರೊಂದಿಗೆ ಸಂವಾದ ನಡೆಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರೊ. ರಾಘವೇಂದ್ರ ಪಾಟೀಲ್ ಅವರು ಕಥೆ, ಕಾದಂಬರಿಗಳಲ್ಲಿ ಬರುವಂತಹ ಪಾತ್ರಗಳು ಆಯಾ ಪ್ರದೇಶದ ಭಾಷೆಯಲ್ಲಿಯಲ್ಲಿಯೇ ಮಾತನಾಡಿದಾಗ ಹೆಚ್ಚು ಪರಿಣಾಮಕಾರಿಯಾಗಬಲ್ಲುದು ಎಂದರು.

ಕಥೆಗಾರ ಸೃಷ್ಠಿಸುವ ಪಾತ್ರಗಳು ಸಶರೀರವಾಗಿ ಸಾಕ್ಷಾತ್ಕಾರಗೊಳ್ಳಬೇಕು. ಕವಿ, ಬರಹಗಾರ, ಕಥೆಗಾರ ಕಲ್ಪನೆಯನ್ನು ಕಟ್ಟಿಕೊಟ್ಟರೂ ಓದುಗರಿಗೆ ನೈಜತೆಯ ಅನುಭವವಾಗಬೇಕು. ಕಥೆ ಬರೆಯುತ್ತಾ ಹೋದಂತೆಲ್ಲಾ ಸ್ವರೂಪ ಬದಲಾಗುತ್ತಾ ಹೋಗುತ್ತದೆ ಎಂದು ಹೇಳಿದರು.

ತಮ್ಮ `ತೇರು’ ಕಾದಂಬರಿಯ ಹಿನ್ನೆಲೆ, ಆ ಪ್ರದೇಶದ ಗೊಂದಲಿಗರ ಆಡು ಭಾಷೆಯ ಬಳಕೆ, ದೇಸಗತಿ ಕೃತಿಯ ಕಥಾ ಹಂದರದ ಬಗ್ಗೆ ವಿವರಣೆ ನೀಡಿದರು.

ಕೃಷಿ ವಿಜ್ಞಾನಿಗಳೂ, ಸಾಹಿತಿಗಳಾದ ಡಾ.ಕೆ.ಎನ್. ಗಣೇಶಯ್ಯ ಅವರು, ಕೇವಲ ಅನುಭವದಿಂದ ಸಾಹಿತ್ಯ ರಚನೆ ಸಾಧ್ಯ ಎಂಬ ಧೋರಣೆ ಸರಿಯಲ್ಲ. ಅನುಭವದೊಟ್ಟಿಗೆ ಕಾಲ್ಪನಿಕತೆ ಸಹ ಬೇಕಾಗುತ್ತದೆ ಎಂದರು. 

ಟ್ರಸ್ಟ್ ಅಧ್ಯಕ್ಷ ಬಿ.ಹೆಚ್. ಆಂಜನೇಯ, ಪುಟಗನಾಳ್ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಸಂವಾದದಲ್ಲಿ ಆಯೋಜಕರಾದ ಮಹಾಂತೇಶ್ ನಿಟ್ಟೂರು, ಸಾಹಿತಿಗಳಾದ ಬಾ.ಮ. ಬಸವರಾಜಯ್ಯ, ಡಾ. ಆನಂದ ಋಗ್ವೇದಿ, ಮಲ್ಲಮ್ಮ ನಾಗರಾಜ್, ಪಾಪು ಗುರು, ಓಂಕಾರಯ್ಯ ತವನಿಧಿ, ಕೆ.ಎಸ್. ವೀರಭದ್ರಪ್ಪ ತೆಲಗಿ ಮತ್ತಿತರರು ಪಾಲ್ಗೊಂಡಿದ್ದರು.

ಗಾಯಕಿ ಸಂಗೀತ ರಾಘವೇಂದ್ರ ಅವರು ಮಹಾಂತೇಶ್ ನಿಟ್ಟೂರು ಅವರ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವ ಜೊತೆಗೆ ಪ್ರಾರ್ಥಿಸಿದರು. ಮಹಾಂತೇಶ್ ನಿಟ್ಟೂರು ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಗಂಗಾಧರ ಬಿ.ಎಲ್. ನಿಟ್ಟೂರು ಸ್ವಾಗತಿಸಿದರು. 

error: Content is protected !!