ಜಿಲ್ಲೆಯ ಇಬ್ಬರು ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವದ ಗೌರವ

ಜಿಲ್ಲೆಯ ಇಬ್ಬರು ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವದ ಗೌರವ

ಎನ್.ಎಸ್. ಶಂಕರ್, ಆರ್.ಜಿ. ಹಳ್ಳಿಗೆ ಇಂದು  ಪ್ರಶಸ್ತಿ ಪ್ರದಾನ

ದಾವಣಗೆರೆ,ಅ.31- ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡು -ನುಡಿಗಾಗಿ ಸಲ್ಲಿಸುತ್ತಿರುವ ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಮೂಲತಃ ದಾವಣಗೆರೆ ಜಿಲ್ಲೆಯವರಾದ ಹಿರಿಯ ಪತ್ರಕರ್ತ, ಚಲನಚಿತ್ರ ನಿರ್ದೇಶಕ ಎನ್.ಎಸ್. ಶಂಕರ್ ಅವರೂ ಸೇರಿದಂತೆ, 69 ಮಹನೀಯರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

ಇದೇ ಸಂದರ್ಭದಲ್ಲಿ, ಮೈಸೂರು ರಾಜ್ಯಕ್ಕೆ `ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ವಿವಿಧ ಕ್ಷೇತ್ರಗಳ 50 ಮಹಿಳೆಯರು ಮತ್ತು 50 ಪುರುಷರು ಒಟ್ಟು 100 ಸಾಧಕರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿದ್ದು, ಈ ಪ್ರಶಸ್ತಿಗೆ ದಾವಣಗೆರೆ ಜಿಲ್ಲೆಯವರಾದ ಹಿರಿಯ ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ್ ಭಾಜನರಾಗಿದ್ದಾರೆ.

ನಾಳೆ ದಿನಾಂಕ 1ರ ಶುಕ್ರವಾರ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ರಾಜ್ಯ ಸರ್ಕಾರ ಏರ್ಪಾಡಿಸಿರುವ ಸಮಾರಂಭದಲ್ಲಿ ಎನ್. ಎಸ್. ಶಂಕರ್ ಹಾಗೂ  ಆರ್. ಜಿ. ಹಳ್ಳಿ ನಾಗರಾಜ ಅವರುಗಳೂ ಸೇರಿದಂತೆ, ಕರ್ನಾಟಕ ರಾಜ್ಯೋತ್ಸವ ಮತ್ತು ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಎನ್‌.ಎಸ್. ಶಂಕರ್ ಅವರ ತಂದೆ ತಾಯಿ ನ್ಯಾಮತಿಯಲ್ಲಿ ನೆಲೆಸಿದ್ದರು. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಶಂಕರ್, ತಮ್ಮ ಶಿಕ್ಷಣದ ನಂತರ ಪತ್ರಕರ್ತರಾಗಿ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮುಖ್ಯವಾಗಿ ಪ್ರಜಾವಾಣಿ, ಮುಂಗಾರು, ಸುದ್ದಿ ಸಂಗಾತಿ, ಲಂಕೇಶ ಪತ್ರಿಕೆಯಲ್ಲಿ ಕೆಲಸ ಮಾಡಿ, ಕಿರುಚಿತ್ರ, ಚಲನಚಿತ್ರ ನಿರ್ದೇಶಕರಾಗಿ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.  

ನಟ ರಮೇಶ್ ಅಭಿನಯದ `ಉಲ್ಟಾಪಲ್ಟಾ’, `ರಾಂಗ್ ನಂಬರ್’ ಮೊದಲಾದ ಚಿತ್ರ ನಿರ್ಮಿಸಿದ್ದಲ್ಲದೆ, ಈಗ ಮೂರು ಕಥೆಗಳ ಆಧಾರಿತ ಸಿನಿಮಾ ನಿರ್ಮಿಸುತ್ತಿದ್ದಾರೆ.  ಇವರ ಹಲವಾರು ಸ್ವತಂತ್ರ ಕೃತಿಗಳು ಹಾಗೂ ಅನುವಾದ ಕೃತಿಗಳು ಹೊರ ಬಂದಿವೆ. ಇವರ ಸಾಧನೆ ಗುರುತಿಸಿ 2024ರ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ನೀಡಿದೆ. ಪ್ರಶಸ್ತಿ ಐದು ಲಕ್ಷ ನಗದು, 25 ಗ್ರಾಂ ಚಿನ್ನದ ಪ್ರಶಸ್ತಿ ಫಲಕ ಒಳಗೊಂಡಿದೆ.

ಆರ್.ಜಿ. ಹಳ್ಳಿ ನಾಗರಾಜ ಅವರು ಮೂಲತಃ ಪತ್ರಕರ್ತರು, ಸಾಹಿತಿ. ದಾವಣಗೆರೆ ತಾಲ್ಲೂಕು ರಾಮಗೊಂಡನಹಳ್ಳಿ ರೈತ ಕುಟುಂಬದಲ್ಲಿ ಜನಿಸಿ, ಮೈಸೂರು, ಬೆಂಗಳೂರಿನಲ್ಲಿ ಶಿಕ್ಷಣ ಪಡೆದು ವಿಜಯ ಕರ್ನಾಟಕ, ಉಷಾಕಿರಣ, ವಿಜಯವಾಣಿ ಪತ್ರಿಕೆಗಳಲ್ಲಿ ವರದಿಗಾರರಾಗಿ,  ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇದುವರೆಗೆ 12 ಕೃತಿ ಪ್ರಕಟಿಸಿರುವ ನಾಗರಾಜ, ಕಥೆ, ಕವಿತೆ, ವಿಮರ್ಶೆ, ವ್ಯಕ್ತಿ ಚಿತ್ರ ಬರೆದಿದ್ದಾರೆ. 

ಈಗ `ಅನ್ವೇಷಣೆ’ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಪುಸ್ತಕ ಜಾಥಾ ಏರ್ಪಡಿಸಿದ್ದಾರೆ. ಭಾಷಾ ಚಳವಳಿಯಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದಾರೆ. 

ಇವರ ಸಾಧನೆ ಗಮನಿಸಿ ರಾಜ್ಯ ಸರ್ಕಾರ ಇವರಿಗೆ 2024ರ ಸುವರ್ಣ ಕರ್ನಾಟಕ ರಾಜ್ಯೋತ್ಸವದ ವಿಶೇಷ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪ್ರಶಸ್ತಿ ಒಂದು ಲಕ್ಷ ಮೊತ್ತ, ಪ್ರಶಸ್ತಿ ಫಲಕ ಒಳಗೊಂಡಿದೆ.

error: Content is protected !!