ಲಕ್ಷ್ಮಿ ರಂಗನಾಥ ಸ್ವಾಮಿ ತೆಪ್ಪೋತ್ಸವಕ್ಕೆ ಸಿದ್ಧತೆ

ಲಕ್ಷ್ಮಿ ರಂಗನಾಥ ಸ್ವಾಮಿ ತೆಪ್ಪೋತ್ಸವಕ್ಕೆ ಸಿದ್ಧತೆ

ಮಲೇಬೆನ್ನೂರು, ಅ.31- ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕೊಮಾರನಹಳ್ಳಿ ಗ್ರಾಮದ ಹರಿಹರಾತ್ಮಕ ಹೆಳವನಕಟ್ಟೆ ಲಕ್ಷ್ಮಿ ರಂಗನಾಥ ಸ್ವಾಮಿ ತೆಪ್ಪೋತ್ಸವ ತಯಾರಿಗೆ ಬುಧವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ.

ಸಾಂಪ್ರದಾಯಿಕ ರೀತಿ ಅರ್ಚಕ ಗುರುರಾಜಾ ಚಾರ್‌ ನೇತೃತ್ವದಲ್ಲಿ ವಿನಾಯಕ, ಕ್ಷೇತ್ರನಾಥ ಹಾಗೂ ಗಂಗಾ, ತೆಪ್ಪ ಕಟ್ಟುವ ಸಾಮಗ್ರಿಗಳಾದ ಬಿದರಿನ ಬೊಂಬು, ಡ್ರಂ, ಹಗ್ಗದ ಪೂಜೆ ನೆರವೇರಿಸಿದರು. ಗೋವಿಂದ ನಾಮ ಸ್ಮರಣೆ ಮಾಡುತ್ತಲೇ ತೆಪ್ಪ ಕಟ್ಟುವ ಕೆಲಸ  ಸಾಗಿತ್ತು. 

48 ಡ್ರಂ ಬಳಸಿ 2 ತೆಪ್ಪ ಕಟ್ಟಲಾಗುವುದು, ಕೊಮಾರನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ಮಲೇಬೆನ್ನೂರು, ದಿಬ್ಬದಹಳ್ಳಿ, ಹರಳಹಳ್ಳಿ, ಹಾಲಿವಾಣ, ಕೊಪ್ಪ ಮೊದಲಾದ ಕಡೆಯಿಂದ ಸ್ವಯಂ ಪ್ರೇರಣೆಯಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಭಕ್ತರು ಸೇವೆ ಮಾಡುತ್ತಿದ್ದಾರೆ ಎಂದು ರಾಮಚಂದ್ರಾಚಾರ್‌ ಪ್ರಶಂಸೆ ವ್ಯಕ್ತಪಡಿಸಿದರು.

15 ವರ್ಷದ ನಂತರ ಉತ್ಸವ ಮಾಡುವ ಭಾಗ್ಯ ಸಿಕ್ಕಿದೆ ಎಂದು ಕೇಶವ, ಗದ್ದಿಗೇಶ್‌, ರಂಗ ನಾಥ, ಮಂಜುನಾಥ್, ಕಲ್ಲೇಶ್‌, ಧನಂಜಯ, ಆಂಜನೇಯ, ಹಾಲೇಶ್‌  ತಿಳಿಸಿದರು.

ಈಗಾಗಲೇ ಮೊದಲ ಹಂತದ ಸ್ವಚ್ಛತೆ ಮಾಡಲಾಗಿದೆ, ಕೆರೆಯಲ್ಲಿ ಬೆಳದಿರುವ ಜಲ ಸಸ್ಯ, ಮುಳ್ಳುಕಂಟಿ, ಲಂಟನ್‌ ಗಿಡ ತೆರವು ಮಾಡಲಾಗುವುದು ಎಂದು ರೇವಣಸಿದ್ದಪ್ಪ ಐರಣಿ ಮೂರ್ತಿ, ಮಹೇಶ್‌ ಮಾಹಿತಿ ನೀಡಿದರು.

ಕೆರೆದಂಡೆ ಅಲ್ಪಸ್ವಲ್ಪ ದುರಸ್ತಿ, ಮುಖ್ಯ ಸ್ಥಳದ ಅಟ್ಟಣಿಗೆ ನಿರ್ಮಾಣ ಮುಂದಿನ ವಾರ ಮಾಡಲಾಗುವುದು ಎಂದರು.

ದಾನಿಗಳು ಕೆಲಸ ಮಾಡುವವರಿಗೆ ತಿಂಡಿ, ಕುಡಿಯುವ ನೀರು, ಚಹಾ, ಕಾಫಿ ಊಟೋಪಚಾರ ವ್ಯವಸ್ಥೆ ಮಾಡಿರುವುದು ವಿಶೇಷವಾಗಿತ್ತು.

ಒಟ್ಟಾರೆ ತೆಪ್ಪೋತ್ಸವ ದೀಪೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.

ಕಂಕಣಧಾರಣೆ : ತೆಪ್ಪೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ 11-30 ಕ್ಕೆ ಶ್ರೀ ರಂಗನಾಥ ಸ್ವಾಮಿಗೆ ಕಂಕಣಧಾರಣೆ ಮತ್ತು ಕೆರೆಯ ನಡುಗಡ್ಡೆಯಲ್ಲಿ ಧ್ವಜ ಕಂಬ ಸ್ಥಾಪನೆ ಮಾಡಲಾಗು ವುದೆಂದು ಸುರೇಶ್ ಶಾಸ್ತ್ರಿ ತಿಳಿಸಿದ್ದಾರೆ.

error: Content is protected !!