ಹರಪನಹಳ್ಳಿ, ಅ. 31 – ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರನ್ನು ಕಡೆಗಣನೆ ಮಾಡಲಾಗಿದ್ದು, ಕಾರ್ಯಕ್ರಮ ಬಹಿಷ್ಕರಿಸ ಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ತಿಳಿಸಿದ್ದಾರೆ.
ಕಳೆದ ಐದು ದಿನಗಳ ಹಿಂದೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜರುಗಿದ ಪೂರ್ವ ಭಾವಿ ಸಭೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರ ಹೆಸರನ್ನು ಹಾಕಬೇಕು ಎಂದು ಹೇಳಿದಾಗ, ತಹಶಿಲ್ದಾರ್ ಗಿರೀಶ್ ಬಾಬು ನಾವು ಜಿಲ್ಲಾಧಿಕಾರಿಯವರ ಹತ್ತಿರ ಚರ್ಚೆ ಮಾಡಿ ನಿಮಗೆ ತಿಳಿಸುತ್ತೇವೆ ಎಂದು ಹೇಳಿದ್ದರು.
ಆದರೆ, ಏಕಾಏಕಿ ಆಹ್ವಾನ ಪತ್ರಿಕೆ ಸಿದ್ಧ ಮಾಡಿದ್ದು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಹೆಸರನ್ನು ಉದ್ದೇಶ ಪೂರ್ವಕವಾಗಿ ಬಿಡಲಾಗಿದೆ. ಈ ಬಗ್ಗೆ ನಾವು ತಹಶೀಲ್ದಾರ್ರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿದಾಗ ನಾವು ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮಾಡಲಾಗಿದೆ ಎಂದು ಹೇಳಿದರು. ಪಕ್ಕದ ಹೂವಿನ ಹಡಗಲಿಯಲ್ಲಿ ಜರುಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹಡಗಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಹೆಸರನ್ನು ಹಾಕಲಾಗಿದೆ. ಅಲ್ಲಿ ಇಲ್ಲದ ಶಿಷ್ಟಚಾರ ಇಲ್ಲಿ ಏಕೆ ಎಂದು ಕೇಳಿದಾಗ, ಉಡಾಫೆ ಉತ್ತರ ನೀಡಿದರು. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿ ತೀರ್ಮಾನದಂತೆ ನಾವು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೆವೆ ಎಂದು ಉಚ್ಚೆಂಗಪ್ಪ ಹೇಳಿದರು.