ದಾವಣಗೆರೆ, ಅ.30- ಆಕರ್ಷಕ ವಿದ್ಯುತ್ ದೀಪ, ವಿವಿಧ ವಿನ್ಯಾಸದ ಮಣ್ಣಿನ ಹಣತೆ ಮತ್ತು ಘಮಘಮಿಸುವ ಊದುಬತ್ತಿಗಳು ಭರ್ಜರಿಯಾಗಿ ದೀಪಾವಳಿ ಆಚರಿಸುವ ಯೋಜನೆ ಹೊತ್ತ ಜನರನ್ನು ತನ್ನೆಡೆಗೆ ಸೆಳೆಯುತ್ತಿದ್ದವು.
ಒಂದೆಡೆ ಕುರುಕಲು ತಿಂಡಿ ಮತ್ತು ಉಪ್ಪಿನಕಾಯಿ ಜನರ ಬಾಯಲ್ಲಿ ನೀರೂರಿಸಿದರೆ, ಇನ್ನೊಂದೆಡೆ ಕಂಗೊಳಿ ಸುವ ಭಿನ್ನ-ಭಿನ್ನ ಅಲಂಕಾರಿಕ ಹೂವಿನ ಮಾಲೆಗಳು ಎಲ್ಲರ ಮನ ಕರಗಿಸುತ್ತಿದ್ದವು.
ಸೆಣಬಿನ ಬ್ಯಾಗ್, ಸಿರಿಧಾನ್ಯದ ಬಿಸ್ಕೇಟ್, ವೈಯರ್ ಬ್ಯಾಗ್, ಉಲನ್ ತೋರಣ, ಬಾಗಿಲು ಪಡದೆ ಸೇರಿದಂತೆ ಇತರೆ ಅಲಂಕಾರಿಕ ವಸ್ತುಗಳು ಅಲ್ಲಿ ಮಾರಾಟ ಮಾಡಲ್ಪಟ್ಟವು.
ದೀಪಾವಳಿ ಹಬ್ಬದ ಪ್ರಯುಕ್ತ ಎನ್.ಆರ್.ಎಲ್.ಎಂ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ್ದ ದೀಪ ಸಂಜೀವಿನಿ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು.
ನಗರದ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಬಟ್ಟೆ ಅಂಗಡಿ ಮುಂಭಾಗ ಹಾಕಿದ್ದ ಮಳಿಗೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೇಟಿ ನೀಡಿ, ಮಹಿಳೆಯರು ತಯಾರಿಸಿದ ಮಣ್ಣಿನ ಹಣತೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಖರೀದಿಸಲು ಮುಂದಾದರು.
ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಜಿ.ಪಂ. ಯೋಜನಾ ನಿರ್ದೇಶಕಿ ರೇಷ್ಮಾ ಕೌಸೂರು ವಿದ್ಯುತ್ ದೀಪಾಲಂಕಾರ ಬೆಳಗಿಸಿ ಚಾಲನೆ ನೀಡಿ, ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡುವುದು ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ಸುರೇಶ್ ಬಿ. ಇಟ್ನಾಳ್ ಅವರ ಮಾರ್ಗದರ್ಶನದಲ್ಲಿ ಜನ ದಟ್ಟಣೆ ಇರುವ ನಗರದ ಎರಡು ಪ್ರದೇಶಗಳಲ್ಲಿ ವ್ಯಾಪಾರ ಮಾಡಲು ಮಳಿಗೆಗೆ ಒಂದು ದಿನ ಅವಕಾಶ ಕಲ್ಪಿಸಿದ್ದೇವೆ ಎಂದರು.
20 ಕ್ಕೂ ಹೆಚ್ಚು ಸಂಜೀವಿನಿ ಸ್ವಸಹಾಯ ಸಂಘಗಳು ಭಾಗವಹಿಸಿದ್ದವು. ಸುಮಾರು 1,10,000/-ರೂಗಳವರೆಗೆ ಉತ್ಪನ್ನಗಳನ್ನು ಮಾರಾಟ ಮಾಡಿದರು.
ಈ ವೇಳೆ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಉಪಕಾರ್ಯದರ್ಶಿ
ಕೃಷ್ಣನಾಯ್ಕ, ಡಿಪಿಎಂ ಭೋಜರಾಜ್, ಕೆಎಸ್ಆರ್ಟಿಸಿ ಡಿ.ಸಿ ಸಿದ್ದೇಶ್ ಹೆಬ್ಬಾಳ್, ಕೆಎಸ್ಆರ್ಟಿಸಿ ಡಿಎಂಇ ವೆಂಕಟೇಶ್ ಸೇರಿದಂತೆ, ಮತ್ತಿತರರಿದ್ದರು.