ಜಗಳೂರು, ಅ.30- ತಾಲ್ಲೂಕಿನ ಹಿರೇಮಲ್ಲನಹೊಳೆ ಕೆರೆ ಅಂಗಳದಲ್ಲಿ ಸಾವನ್ನಪ್ಪಿದ ಮಗುವಿನ ಪೋಷಕರಿಗೆ ಜಿಲ್ಲಾಡಳಿತದಿಂದ 5ಲಕ್ಷ ರೂ., ವೈಯಕ್ತಿಕವಾಗಿ 25,000 ಹಾಗೂ ಗ್ರಾ.ಪಂ ವತಿಯಿಂದ 25,000 ರೂ. ಪರಿಹಾರ ಒದಗಿಸಲಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಲಜಾಗೃತಿ ಮೂಡಿಸಲು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಕೆರೆಗಳು ಕೋಡಿ ಬಿದ್ದಿವೆ ಕೆರೆ, ಕಟ್ಟೆಗಳು ಭರ್ತಿಯಾದ ಹಿನ್ನೆಲೆ ಎಚ್ಚರಿಕೆ ನಾಮಪಲಕ ಅಳವಡಿಸಿ,ಟಾಂ ಟಾಂ ಹೊಡೆಸುವ ಮೂಲಕ ಸಾವಿನ ಘಟನೆಗಳು ಮರುಕಳಿಸದಂತೆ ಸಾರ್ವಜನಿಕರು ಸುರಕ್ಷಿತವಾಗಿರಲು ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಕಳೆದ 5ದಶಕಗಳ ನಂತರ 57 ಕೆರೆ ಯೋಜನೆ ಹಾಗೂ ವರುಣನ ನರ್ತನದಿಂದ 35ಕ್ಕೂ ಅಧಿಕ ಕೆರೆಗಳು ಕೋಡಿಬಿದ್ದಿರುವುದು ಒಂದೆಡೆ ಸಂತಸವಾದರೆ, ಮತ್ತೊಂದೆಡೆ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಕೆರೆ ಅಂಗಳದಲ್ಲಿ ಮಂಗಳವಾರ ಎರಡುವರ್ಷದ ಮಗುವಿನ ಸಾವನ್ನಪ್ಪಿದ ಘಟನೆ, ಅಸಗೋಡು ವಡ್ಡರಹಟ್ಟಿಯ ಕೃಷಿಹೊಂಡದಲ್ಲಿ ಬಿದ್ದು ಎರಡು ಮಕ್ಕಳ ಸಾವಿನ ಘಟನೆ, ಸಂಗೇನಹಳ್ಳಿ ಕೆರೆ ಬಳಿ ಓರ್ವ ವ್ಯಕ್ತಿ ಸೇರಿದಂತೆ ನಾಲ್ಕು ಜನರ ಸರಣಿ ಮರಣ ನೋವು ತಂದಿವೆ ಎಂದರು.
ತಾಲ್ಲೂಕಿನಾದ್ಯಂತ ಕೆರೆ, ಕಟ್ಟೆ ಕೃಷಿ ಹೊಂಡಗಳು ನೀರಿನಿಂದ ತುಂಬಿವೆ. ಪೋಷಕರು ಮಕ್ಕಳನ್ನು ನೀರಿನ ಸಂಗ್ರಹಣೆ ಪ್ರದೇಶಗಳಿಂದ ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು.
ಗ್ರಾಮದಲ್ಲಿ ನಿರಾಶ್ರಿತರಿಗೆ ಸರ್ಕಾರದಿಂದ ಸೌಲಭ್ಯ ಕಲ್ಪಿಸಲಾಗುವುದು. ನೀರಿನಲ್ಲಿ ಮುಳುಗಿದ ಮನೆಗಳನ್ನು ತೊರೆದು ಕಾಳಜಿ ಕೇಂದ್ರದಲ್ಲಿ ವಾಸವಿರಬೇಕು ಎಂದರು.
ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಮಾತನಾಡಿ, ಕೆರೆ ಅಂಗಳದಲ್ಲಿ ಒತ್ತುವರಿಯಾಗಿ ಮನೆ ನಿರ್ಮಾಣಮಾಡಿಕೊಂಡವರಿಗೆ ಎನ್ ಡಿ ಆರ್ ಎಫ್ ನಡಿ ಪರಿಹಾರ ಸಿಗುವುದಿಲ್ಲ. ಎಸ್ .ಡಿ.ಆರ್ ಎಫ್ ನಡಿ ತಲಾ ಲಕ್ಷರೂ. ಪರಿಹಾರ, ಶಾಶ್ವತ ಸೂರು ಕಲ್ಪಿಸಲಾಗುವುದು.
ಹಿಂಗಾರು ಬೆಳೆ ಪರಿಹಾರಕ್ಕೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸರ್ವೆ ಕಾರ್ಯ ಪ್ರಕ್ರಿಯೆಯಲ್ಲಿದ್ದು, ಶೀಘ್ರದಲ್ಲಿ ಪ್ರತಿ ಎಕರೆಗೆ ಖುಷ್ಕಿ ಬೆಳೆ 8500, ತೋಟಗಾರಿಕೆ ಬೆಳೆ 22,000, ಕೃಷಿ ತರಕಾರಿ ಬೆಳೆ 17,000 ರೂ. ಎರಡು ಎಕರೆಗಳಿಗೆ ಸೀಮಿತಗೊಳಿಸಿ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜಿ.ಪಂ ಸಿಇಓ ಸುರೇಶ್ ಹಿಟ್ನಾಳ್ ಮಾತನಾಡಿ,’ಕೆರೆಗಳ ಕೋಡಿಗಳ ಸುತ್ತಮುತ್ತ ಜಂಗಲ್ ಕಟ್ಟಿಂಗ್, ಕೋಡಿಗಳ ದುರಸ್ಥಿಗೊಳಿಸಲಾಗುವುದು. ಜಲಾವೃತಗೊಂಡು ಶಿಥಿಲಾವಸ್ಥೆಯಲ್ಲಿನ ಶಾಲೆಗಳ ದುರಸ್ಥಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಲೋಕೇಶ್, ಉಪವಿಭಾಗ ಅಧಿಕಾರಿ ಸಂತೋಷ್ ಕುಮಾರ್,
ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ, ತಾ.ಪಂ ಇಓ ಕೆಂಚಪ್ಪ, ಬಿಇಓ ಹಾಲಮೂರ್ತಿ, ಪಿಡಬ್ಲೂಡಿ ಎಇಇ ನಾಗರಾಜ್,
ಜಿ.ಪಂ.ಎಇಇ ಶಿವಮೂರ್ತಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.