ದಾವಣಗೆರೆ, ಅ. 29- ಪ್ರಾಚೀನ ಆಯುರ್ವೇದ ಪದ್ಧತಿಯನ್ನು ಕ್ರಮವಾಗಿ ಅನುಸರಿಸಿದರೆ ನಿರೋಗಿಗಳಾಗಲು ಮತ್ತು ದೀರ್ಘಾಯುಷ್ಯ ಹೊಂದಲು ಸಾಧ್ಯವಿದೆ ಎಂದು ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.
ನಗರದ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಿರೇಮಠದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ, ಜಿಲ್ಲಾ ಘಟಕ, ಅಶ್ವಿನಿ, ತಪೋವನ, ಸುಶ್ರುತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳು, ಆಯುಷ್ ಫೆಡರೇಷನ್ ಆಫ್ ಇಂಡಿಯಾ, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾ ಘಟಕ, ಶ್ರೀ ಧನ್ವಂತರಿ ಆಯುರ್ವೇದ ಔಷಧ ಪ್ರತಿನಿಧಿಗಳ ಸಂಘ, ಆಯುರ್ವೇಧ ಔಷಧಿ ವಿತರಕರು ಮತ್ತು ಮಾರಾಟಗಾರರು ಇವರ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ 9ನೇ ಆಯುರ್ವೇದ ದಿನಾಚರಣೆ (ಧನ್ವಂತರಿ ಜಯಂತಿ) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಪೂರ್ವಿಕರು ಆಯುರ್ವೇದ ಪದ್ಧತಿಯನ್ನು ಅನುಸರಿಸುತ್ತಾ ಬಂದಿದ್ದರಿಂದ ದೀರ್ಘಾಯುಷಿಗಳಾ ಗಿದ್ದರು. ಇಂದಿನ ಯುವ ಪೀಳಿಗೆ ಕೂಡ ದೀರ್ಘಾಯುಷ್ಯ ಹೊಂದಲು ಉತ್ತಮ ಆರೋಗ್ಯ ಶೈಲಿ ಹಾಗೂ ಆಯುರ್ವೇದ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಈ ನಾಲ್ಕು ವೇದಗಳೊಟ್ಟಿಗೆ ಪಂಚಮ ವೇದವಾಗಿ ಆಯುರ್ವೇದವನ್ನು ಸೇರಿಸಿಕೊಳ್ಳಬಹು ದಾಗಿದೆ. ಆಯುರ್ವೇದ ಜ್ಞಾನಕ್ಕೂ ವಿಶ್ವ ಮನ್ನಣೆ ದೊರೆತು, ಪ್ರತಿ ಮನೆ ಮನೆಗಳಿಗೂ ಆಯುರ್ವೇದ ತಲುಪುವ ಕೆಲಸವಾಗಬೇಕಿದೆ ಎಂದರು.
ಮನೆಯಲ್ಲಿಯೇ ನಿತ್ಯ ಅಡುಗೆಗೆ ಬಳಕೆ ಮಾಡುವ ಪದಾರ್ಥಗಳ ಮೂಲಕ ಆಯುರ್ವೇದ ವೈದ್ಯ ಪದ್ಧತಿಯನ್ನು ಅನುಸರಿಸಬಹುದಾಗಿದೆ. ಜನರಲ್ಲಿ ಹಿತ್ತಲ ಗಿಡ ಮದ್ದಲ್ಲ ಎಂಬ ಉದಾಸೀನ ಮನೋಭಾವನೆ ಇದೆ. ಪರಮ ಜ್ಞಾನವಾಗಿರುವ ಆಯುರ್ವೇದಿಂದ ನಿರೋಗಿಗಳಾಗಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಯು. ಯೋಗೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೊದಲ ಆಯುರ್ವೇದ ದಿನವನ್ನು 2016 ರಂದು ಆಚರಿಸಲಾಯಿತು. ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ವ್ಯವಸ್ಥೆಗಳಲ್ಲಿ ಒಂದೆಂದು ಕರೆಯಲ್ಪಡುವ ಆಯುರ್ವೇದವು ಅದರ ಮೂಲವನ್ನು ಐದು ಸಾವಿರ ವರ್ಷಗಳ ಹಿಂದೆ ಗುರುತಿಸುತ್ತದೆ ಎಂದರು.
ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಜ್ಞಾನೇಶ್ವರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಮಹತ್ವ ಬರುತ್ತಿದೆ. ಜಗತ್ತಿನಾದ್ಯಂತ ಹೆಮ್ಮರವಾಗಿ ಬೆಳೆಯುತ್ತಿದೆ. ಆಯುರ್ವೇದ ಪದ್ಧತಿಯನ್ನು ನೋಡುವ ದೃಷ್ಟಿಕೋನ ಸಹ ಬದಲಾಗುತ್ತಿದೆ. ಸರ್ಕಾರ ಕೂಡ ಈ ಪದ್ಧತಿಗೆ ಹೆಚ್ಚಿನ ಮನ್ನಣೆ ನೀಡುತ್ತಿದೆ ಎಂದರು.
ಪತಂಜಲಿ ಆಯುರ್ವೇದ ಚಿಕಿತ್ಸಾಲ ಯದ ಮುಖ್ಯಸ್ಥ ಷಣ್ಮುಖಪ್ಪ ಮಾತನಾಡಿ, ಔಷಧ ಆಹಾರವಾಗುವ ಬದಲು, ಆಹಾರವೇ ಔಷಧವಾಗಬೇಕಿದೆ. ಒತ್ತಡ ಮುಕ್ತ ಜೀವನದಿಂದ ಆರೋಗ್ಯವಂತರಾಗಿ, ಆಯುಷ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ತಪೋವನ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಶ್ವಿನಿ, ಸುಶ್ರುತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಕ್ಬರ್ ಖಾನ್, ಆಯುರ್ವೇದ ಹಿರಿಯ ತಜ್ಞ ಡಾ. ಉಜ್ಜಪ್ಪ ಎಸ್.ಮಾಳಾಪುರ, ಡಾ. ಮಲ್ಲಿಕಾರ್ಜುನ ಬೂದಾಳ್, ಡಾ. ಸಿದ್ಧೇಶ್, ಡಾ. ಯಶವಂತ್, ಡಾ.ಲಿಂಗರಾಜ್, ಡಾ.ಶಾಂತಕುಮಾರ್, ಡಾ.ಉಮೇಶ್ ಹಿರೇಮಠ ಮತ್ತಿತರರು ಭಾಗವಹಿಸಿದ್ದರು.