ದಾವಣಗೆೆರೆ, ಅ.30- ಜಾತಿ ಜನಗಣತಿ ವರದಿಯನ್ನು ಸರ್ಕಾರ ಸಂಪುಟದಲ್ಲಿ ಒಪ್ಪಿಗೆ ಪಡೆದು ಬಹಿರಂಗಪಡಿಸದಿದ್ದಲ್ಲಿ ಲಾಯರ್ಸ್ ಗಿಲ್ಡ್ ವತಿಯಿಂದ ಉಚ್ಛ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಗಿಲ್ಡ್ ರಾಜ್ಯ ಸಂಚಾಲಕ ಅನೀಸ್ ಪಾಷ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಜಾತಿ ಜನಗಣತಿ ವರದಿ ಸಿದ್ಧಪಡಿಸಲು ಸಾರ್ವಜನಿಕರ 169 ಕೋಟಿ ರೂ.ಗಳನ್ನು ವ್ಯಯ ಮಾಡಿತ್ತು. ಹೆಚ್.ಕಾಂತರಾಜ್ ಆಯೋಗದ ವರದಿಯನ್ನು ಮುಖ್ಯಸ್ಥರಾದ ಜಯಪ್ರಕಾಶ್ ಹೆಗಡೆಯವರು ವರದಿಯನ್ನು ಫೆಬ್ರವರಿ ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಸರ್ಕಾರ ಈ ವರದಿಯನ್ನು ಕೂಡಲೇ ಅಂಗೀಕರಿಸಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಜಾತಿ ಜನಗಣತಿ ವರದಿಯನ್ನು ಸಿದ್ಧಪಡಿಸಲು ಸರ್ಕಾರ ನೀಡಿದ ನಿರ್ದೇಶನದಂತೆ ವಿವರವಾದ ವರದಿಯನ್ನು ಮಂಡಿಸಿರುತ್ತಾರೆ. ಕೆಲವು ಸಮುದಾಯ ದವರು ಈ ವರದಿ ಅವೈಜ್ಞಾನಿಕವಾಗಿದೆ. ದುರುದ್ದೇಶದ ಸಮಾಜವನ್ನು ಒಡೆಯುವ ಸಮೀಕ್ಷೆ. ಅದನ್ನು ಅಂಗೀಕ ರಿಸಬಾರದು ಎಂದು ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ. ಕೆಲವು ಮಠಾಧೀಶರೂ ಸಹ ಜಾತಿ ಜನಗಣತಿ ಬೇಡ ಎಂದು ಹೇಳುತ್ತಿದ್ದಾರೆ. ಈ ರೀತಿ ಸರ್ಕಾರಕ್ಕೆ ಒತ್ತಡ ಹಾಕುವುದು ನ್ಯಾಯಸಮ್ಮತವಲ್ಲ ಎಂದರು.
ಸರ್ಕಾರ 15 ದಿನಗಳೊಳಗಾಗಿ ಜಯಪ್ರಕಾಶ್ ಹೆಗಡೆ ಮಂಡಿಸಿರುವ ವರದಿಯನ್ನು ಅಂಗೀಕರಿಸಿ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರುದ್ರೇಶ್, ಜಸ್ಟಿನ್ ಜಯಕುಮಾರ್, ಪ್ರದೀಪ್ ಲೋಕಿಕೆರೆ, ಹನೀಫ್ ಸಾಬ್, ಅಂಜಿನಪ್ಪ, ನಾಗರಾಜ್ ಉಪಸ್ಥಿತರಿದ್ದರು.