ಮಳೆ ಹಾನಿಗೆ ತಕ್ಷಣವೇ ಪರಿಹಾರ ನೀಡಲು ಒತ್ತಾಯ

ಮಳೆ ಹಾನಿಗೆ ತಕ್ಷಣವೇ ಪರಿಹಾರ ನೀಡಲು ಒತ್ತಾಯ

ದಾವಣಗೆರೆ, ಅ. 27 – ಹಿಂಗಾರು ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದು, ಕೂಡಲೇ ಪರಿಹಾರ ನೀಡಬೇಕು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಅಬ್ಬರಿಸಿದೆ. ಇದರಿಂದಾಗಿ ರೈತರು ಬೆಳೆದಿದ್ದ ಮೆಕ್ಕೆಜೋಳ, ರಾಗಿ, ಟೊಮ್ಯಾಟೊ, ಭತ್ತ ಸೇರಿದಂತೆ ಹಲವು ಬೆಳೆಗಳು ನೀರು ಪಾಲಾಗಿವೆ. ರೈತರು ಸಂಕಷ್ಟದಲ್ಲಿದ್ದರೂ ಇದುವರೆಗೆ ಪರಿಹಾರ ನೀಡುವ ಕಾರ್ಯ ನಡೆದಿಲ್ಲ. ಸಮೀಕ್ಷೆಯು ಪಾರದರ್ಶಕವಾಗಿ ನಡೆದು ಅರ್ಹ ಫಲಾನುಭವಿಗಳಿಗೆ ಸರ್ಕಾರದ ನೆರವು ಸಿಗುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.

ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಮಳೆ ಸುರಿದಿರುವುದರಿಂದ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರು ಬೆಳೆ ಕಳೆದುಕೊಳ್ಳುವಂತಾಗಿದೆ. ಮುಂಗಾರು ಮತ್ತು ಹಿಂಗಾರು ಮಳೆ ಅಬ್ಬರಕ್ಕೆ ಕನಿಷ್ಠ ಎಂದರೂ ಶೇ. 40 ರಷ್ಟು ಬೆಳೆ ಕಳೆದುಕೊಂಡಿರುವ ರೈತರು ಹಾಕಿರುವ ಅಸಲು ಬರುವುದು ಕಷ್ಟ ಎಂಬಂತಾಗಿದೆ. ಯಾವಾಗಲೂ ಬೆಳೆ ಹಾನಿ ಸಮೀಕ್ಷೆ ತಡವಾಗಿ ಆಗುತ್ತದೆ. ಅರ್ಹ ರೈತರಿಗೆ ನೆರವು ಸಿಗುವುದು ತಡವಾಗುತ್ತದೆ. ಆದಕಾರಣ ಎಷ್ಟು ಸಾಧ್ಯವೋ ಅಷ್ಟು ಬೇಗ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜಗಳೂರು, ಹೊನ್ನಾಳಿ, ದಾವಣಗೆರೆ ದಕ್ಷಿಣ, ಚನ್ನಗಿರಿ ಸೇರಿದಂತೆ ಹಲವೆಡೆ ಹೆಚ್ಚು ಮಳೆಯಾಗಿದೆ. ಕೈಗೆ ಬಂದ ಫಸಲು ಬಾಯಿಗೆ ಬರಲಿಲ್ಲ ಎಂಬಂಥ ಸ್ಥಿತಿಯಲ್ಲಿದ್ದು, ಜನಪ್ರತಿನಿಧಿಗಳು ಇದುವರೆಗೆ ಭೇಟಿ ನೀಡದಿರುವುದು ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಆದಷ್ಟು ಬೇಗ ನೆರೆಯಿಂದ ತತ್ತರಿಸಿ ಹೋಗಿರುವ ರೈತರು ಹಾಗೂ ಜನರಿಗೆ ಸರ್ಕಾರದ ನೆರವು ದೊರಕಿಸಿಕೊಡಲು ಶ್ರಮಿಸಬೇಕು ಎಂದು ವಿನಯ್ ಕುಮಾರ್ ಒತ್ತಾಯಿಸಿದ್ದಾರೆ. 

error: Content is protected !!