ಬಿಸಿಯೂಟ ತಯಾರಕರಿಗೆ 3 ತಿಂಗಳ ವೇತನ ಬಿಡುಗಡೆ

ಬಿಸಿಯೂಟ ತಯಾರಕರಿಗೆ 3 ತಿಂಗಳ ವೇತನ ಬಿಡುಗಡೆ

ಸಭೆ ನಡೆಸಿದ ದಿನವೇ ತತ್‌ಕ್ಷಣ ಆದೇಶ ಹೊರಡಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ

ದಾವಣಗೆರೆ, ಅ.25- ಬೆಂಗ ಳೂರಿನ ಸಮಗ್ರ ಶಿಕ್ಷಣ ಯೋಜನಾ ಧಿಕಾರಿಗಳ ಸಭಾಂಗಣದಲ್ಲಿ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ  ಎಐಟಿಯುಸಿ ಬಿಸಿಯೂಟ ತಯಾರಕರ ಮತ್ತು ಮಧ್ಯಾಹ್ನ ಉಪಹಾರ ಯೋಜನೆ ರಾಜ್ಯಮಟ್ಟದ ಅಧಿಕಾರಿಗಳ ಜೊತೆ ಮೊನ್ನೆ ಸಭೆ ನಡೆಸಲಾಯಿತು.

ಬಿಸಿಯೂಟ ತಯಾರಕರ ವಿವಿಧ ಸಮಸ್ಯೆಗಳಾದ ಏಪ್ರಿಲ್ ಮತ್ತು ಮೇ ತಿಂಗಳ ಬರಗಾಲ ಕಾರ್ಯಕ್ರಮದಲ್ಲಿ ಅಡುಗೆ ಮಾಡಿದ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು, ಬಾಕಿ ಇರುವ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು. ಮರಣ ಪರಿಹಾರ ಜಾರಿಗೊಳಿಸ ಬೇಕು. ನಿವೃತ್ತ ಬಿಸಿಯೂಟ ತಯಾರಕರಿಗೆ ಘೋಷಣೆಯಾಗಿರುವ ಇಡುಗಂಟು ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಹತ್ತರಿಂದ ಇಪ್ಪತ್ತು ವರ್ಷ ಅಡುಗೆ ತಯಾರಕ ರಾಗಿ ಕೆಲಸ ನಿರ್ವಹಿಸಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದಾಗ ಬಿಡುಗಡೆಗೊಳಿಸಿದ ಬಿಸಿಯೂಟ ತಯಾರಕರಿಗೂ ಇಡುಗಂಟು ಹಣ ಕೊಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು. 

ಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು, ಎಸ್. ಡಿ.ಎಂ.ಸಿ. ಮತ್ತು ಮುಖ್ಯ ಶಿಕ್ಷಕರ ಜಂಟಿ ಖಾತೆ ರದ್ದುಗೊಳಿಸಿ ಮುಖ್ಯ ಶಿಕ್ಷಕರು ಮತ್ತು ಅಡುಗೆ ಯವರ ಜಂಟಿ ಬ್ಯಾಂಕ್ ಖಾತೆ ಪುನಃ ಮುಂದುವರೆಸಬೇಕೆಂದು ಒತ್ತಾಯಿಸಲಾಯಿತು. 

ವಾರಕ್ಕೆ ಎರಡು ದಿನ ಮೊಟ್ಟೆ ಕೊಡುತ್ತಿದ್ದನ್ನು ಈಗ ಆರು ದಿನ ಮೊಟ್ಟೆ ಕೊಡುವುದು ಜಾರಿಗೆ ಬಂದಿದೆ. ಆದ್ದರಿಂದ ಮೊಟ್ಟೆ ಸುಲಿ ಯುವುದಕ್ಕೆ ಈಗ ಇರುವ 30 ಪೈಸೆ ಬದಲಾಗಿ 50 ಪೈಸೆ ಕೊಡಬೇಕು, ಈಗ ಶಾಲೆಯಲ್ಲಿ ಹೆಚ್ಚುವರಿ ಕೆಲಸ ಇರುವುದರಿಂದ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಕೊಡ ಬೇಕೆಂದು ಒತ್ತಾಯಿಸಲಾಯಿತು.

ಈ ಎಲ್ಲಾ ಬೇಡಿಕೆಗಳನ್ನು ಆಲಿಸಿದ ಸಚಿವ ಮಧು ಬಂಗಾರಪ್ಪ ಅವರು, ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿ, ವೇತನ ವನ್ನು ಹೆಚ್ಚುವರಿ  ಮಾಡುವುದಕ್ಕೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು. 

ಸಂಘಟನೆ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಮುಖಂಡರುಗಳಾದ ನಿರ್ಮಲ ಮತ್ತು ಶಶಿಕಲಾ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. 

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್, ಶಿಕ್ಷಣ ಇಲಾಖೆ ಕಮೀಷನರ್ ತ್ರಿಲೋಕ ಚಂದ್ರ, ಮಧ್ಯಾಹ್ನ ಉಪಹಾರ ಯೋಜನೆ ನಿರ್ದೇಶಕ ಕುರ್ಮಾ ರಾವ್, ಮಂಜುನಾಥ್ ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಒಟ್ಟಾರೆ ಸಭೆಯಲ್ಲಿ ಸಕಾರಾತ್ಮಕ ವಾಗಿ ಸ್ಪಂದಿಸಿದ ಸಚಿವರು ಎಲ್ಲಾ ಸಮಸ್ಯೆಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ಹಂತ ಹಂತವಾಗಿ ಬಿಸಿ ಯೂಟ ತಯಾರಕರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.

ಸಭೆ ನಡೆದ ದಿನವೇ ಬಾಕಿ ಇದ್ದ ಮೂರು ತಿಂಗಳ ವೇತನವನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದರು.

error: Content is protected !!