ಒಳ ಮೀಸಲಾತಿಗಾಗಿ ಆಗ್ರಹಿಸಿ ಇಂದಿನ ಪ್ರತಿಭಟನೆಯ ಯಶಸ್ವಿಗೆ ಹರಿಹರದ ಸಮುದಾಯ ಕರೆ

ಒಳ ಮೀಸಲಾತಿಗಾಗಿ ಆಗ್ರಹಿಸಿ ಇಂದಿನ ಪ್ರತಿಭಟನೆಯ ಯಶಸ್ವಿಗೆ ಹರಿಹರದ ಸಮುದಾಯ ಕರೆ

ದಾವಣಗೆರೆಯಲ್ಲಿನ ಪ್ರತಿಭಟನೆಗೆ ಹರಿಹರ ತಾಲ್ಲೂಕಿನಿಂದ 2 ಸಾವಿರಕ್ಕೂ ಹೆಚ್ಚು ಮಾದಿಗ ಮತ್ತು ಛಲವಾದಿ ಸಮುದಾಯದ ಜನರು ಪಾಲ್ಗೊಳ್ಳುವಿಕೆ.

-ಎನ್. ಮಹೇಶ್ ಕುಮಾರ್, ಹರಿಹರ ತಾಲ್ಲೂಕು ಮಾದಿಗ ಸಮಾಜದ ಯುವ ಪಡೆಯ ಮುಖಂಡ

ಹರಿಹರ, ಅ.22- ದಾವಣಗೆರೆ ನಗರದಲ್ಲಿ ಜಿಲ್ಲಾ ಮಾದಿಗ ಮತ್ತು ಛಲವಾದಿ ಸಮುದಾಯಗಳ ಒಕ್ಕೂಟದ ವತಿಯಿಂದ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ತೀರ್ಪನ್ನು ಜಾರಿಗೊಳಿಸಲು ಆಗ್ರಹಿಸಿ ನಾಳೆ ದಿನಾಂಕ 23 ರ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆಯಲ್ಲಿ, ಹರಿಹರ ತಾಲ್ಲೂಕಿನಿಂದ 2 ಸಾವಿರಕ್ಕೂ ಹೆಚ್ಚು ಮಾದಿಗ ಮತ್ತು ಛಲವಾದಿ ಸಮುದಾಯದ ಜನರು ಪಾಲ್ಗೊಂಡು ಯಶಸ್ವಿಯಾಗಿಸುವಂತೆ ಹರಿಹರ ತಾಲ್ಲೂಕು ಮಾದಿಗ ಸಮಾಜದ ಯುವ ಪಡೆಯ ಮುಖಂಡ ಎನ್.ಮಹೇಶ್ ಕುಮಾರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಸಂವಿಧಾನದ ಪ್ರಧಾನ ಆಶಯವಾಗಿರುವ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವ ಉದ್ದೇಶದಿಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಉದ್ಯೋಗ ಹೀಗೆ ಸಾರ್ವಜನಿಕ ಜೀವನದ ಎಲ್ಲಾ ರಂಗಗಳಲ್ಲಿ ಸಮರ್ಪಕ ಪ್ರಾತಿನಿಧ್ಯ ತತ್ವವನ್ನು ಅಳವಡಿಸಿ, ಮೀಸಲಾತಿ ಸೌಲಭ್ಯವನ್ನು ಶಾಸನಬದ್ಧವಾಗಿ ಜಾರಿಗೆ ತರಲಾಗಿದೆ. ಆದರೆ, ಕಾಲಾಂತರದಲ್ಲಿ ಅಸ್ಪೃಶ್ಯ ಜಾತಿಗಳನ್ನು ಸ್ಪಶ್ಯ ಜಾತಿಗಳ ಪಟ್ಟಿಯಲ್ಲಿ ಸೇರಿಸಿದ್ದರಿಂದ ಮೀಸಲಾತಿ ನೀತಿಯ ಮೂಲ ಉದ್ದೇಶವೇ ವಿಫಲಗೊಂಡಿತು. 

ಇದರಿಂದಾಗಿ ನೊಂದ ಮಾದಿಗ ಸಮುದಾಯವು ವೈಜ್ಞಾನಿಕ ಸ್ವರೂಪದ ಆಂತರಿಕ ಮೀಸಲಾತಿಗಾಗಿ ಕಳೆದ 30 ವರ್ಷಗಳಿಂದ ಪ್ರತಿಭಟನೆ ಮಾಡುತ್ತಾ ಕಾನೂನು ಹೋರಾಟವನ್ನು ಮಾಡುತ್ತಾ ಬಂದ ಪರಿಣಾಮ, ಕರ್ನಾಟಕ ಸರ್ಕಾರ ನ್ಯಾ. ಎ.ಜೆ.ಸದಾಶಿವ ಆಯೋಗವನ್ನು ರಚಿಸಿ, ವರದಿಯನ್ನು ಪಡೆದು ತದನಂತರ ಸಂಪುಟದ ಉಪ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. 

ವೈಜ್ಞಾನಿಕ ದತ್ತಾಂಶಗಳ ಆಧಾರದ ಮೇಲೆ ಒಳ ಮೀಸಲಾತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದ್ದು, ಆದ್ದರಿಂದ ಸರ್ಕಾರ ಇನ್ನೂ ಹೆಚ್ಚಿನ ವಿಳಂಬ ತೋರದೇ ಒಳ ಮೀಸಲಾತಿ ಅನುಷ್ಠಾನಗೊಳಿಸಲು ಮುಂದಾಗುವಂತೆ ಅವರು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ವಿಕ್ರಮ್ ಎಂ.ದೊಡ್ಡಮನಿ, ಹೆಚ್.ಸಾಗರ್, ವೈ.ಮಹೇಶ್, ಶ್ರೀಕಾಂತ್, ಮಹೇಶ್ ಕುಮಾರ್ ಎನ್, ಷಣ್ಮುಖ, ಮಂಜುನಾಥ್, ಜೆ.ಆಕಾಶ್, ಬಸವರಾಜ್ ಇತರರು ಹಾಜರಿದ್ದರು.

error: Content is protected !!