ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ವೈದ್ಯ ಕಾಲೇಜು ತೆರೆಯಲು ಆಗ್ರಹ

ದಾವಣಗೆರೆ, ಅ.  22- ರಾಜ್ಯ ಸರ್ಕಾರ ವೈದ್ಯಕೀಯ ಕಾಲೇಜುಗಳನ್ನು ಹೊಂದಿರದ ರಾಜ್ಯದ 11 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಹೊರಟಿದೆ. ಅಂದರೆ ಸರ್ಕಾರಿ ಹಾಗೂ ಖಾಸಗಿಯವರ ತಲಾ ಶೇ. 50 ರ ಸಹಭಾಗಿತ್ವದಲ್ಲಿ ಈ ಕಾಲೇಜುಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿರುವ ಬಗ್ಗೆ ಎಐಡಿಎಸ್‌ಓ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಸುಮನ್ ತಿಳಿಸಿದ್ದಾರೆ.

ಪ್ರತಿ ಜಿಲ್ಲೆಯಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಮೆಡಿಕಲ್ ಓದುವ ಅವಕಾಶ ನೀಡಬೇಕೆಂದು ಈ ಯೋಜನೆ ಮಾಡುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಈಗಾಗಲೇ ಸಂಪೂರ್ಣವಾಗಿ ಸರಕಾರದ ಅಡಿಯಲ್ಲಿರುವ ಕಾಲೇಜುಗಳ ಫೀಸ್ ಗಳೇ ಗಗನಕ್ಕೇರಿದ್ದು, ಇನ್ನು ಖಾಸಗಿ ಸಹಭಾಗಿತ್ವದಿಂದ ಹೇಗೆ ಬಡ ವಿದ್ಯಾರ್ಥಿಗಳಿಗೆ ಮೆಡಿಕಲ್ ಶಿಕ್ಷಣ ಸಿಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ದಕ್ಷಿಣ ಕನ್ನಡ, ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬಹುಕಾಲದಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬ ಜನರ ಬೇಡಿಕೆ ಇದೆ. ಈ ನಿತೀಯ ಮೂಲಕ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸಿದ್ದೇ ಆದರೆ ಜನ ಸರ್ಕಾರದಿಂದ ವಂಚಿತರಾಗುತ್ತಾರೆ. ಸರ್ಕಾರ ಖಾಸಗಿಯವರ ಲಾಭಿಗೆ ಶರಣಾಗಿರುವುದನ್ನು ಇದು ತೋರಿಸುತ್ತದೆ ಕಿಡಿಕಾರಿದ್ದಾರೆ.

ಕೂಡಲೇ ಈ ನಿರ್ಧಾರ ಕೈಬಿಟ್ಟು ಸರ್ಕಾರವೇ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ವಹಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಬೇಕೆಂದು ಎಐಡಿಎಸ್‌ಓ ಆಗ್ರಹಿಸುತ್ತದೆ.

error: Content is protected !!