ದಾವಣಗೆರೆ, ಅ.21- ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳಲು ಪತ್ನಿಯನ್ನೇ ಕೊಲೆಗೈದ ಆರೋಪಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 3 ವರ್ಷ ಸಾದಾ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ತಮ್ಮ ಮಗಳು ಚೌಡಮ್ಮಳನ್ನು ಜಗಳೂರು ತಾಲ್ಲೂಕು ಅಸಗೋಡು ಗ್ರಾಮದ ಮಾರುತಿಯೊಂದಿಗೆ ಮದುವೆ ಮಾಡಿಕೊಟ್ಟಿದ್ದೆವು. ಆದರೆ ಆತ ತನ್ನ ಕುಟುಂಬದವರೊಂದಿಗೆ ಸೇರಿ ಆಕೆಗೆ ದೈಹಿಕ ಹಿಂಸೆ ನೀಡುತ್ತಿದ್ದ ಹಾಗೂ ಬೇರೊಂದು ಮದುವೆಯನ್ನೂ ಆಗಿದ್ದ ಎಂದು ಆರೋಪಿಸಿ, ಚೌಡಮ್ಮಳ ತಾಯಿ ಸುಣಗಾರಕೇರಿ ನಿವಾಸಿ ಮರಿದೇವಿ ಚಂದ್ರಪ್ಪ ಅವರು, 2021ರ ನವೆಂಬರ್ 9ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನ್ಯಾಯಾಲಯವು ಚೌಡಮ್ಮಳಿಗೆ ಮಾಸಿಕ 4 ಸಾವಿರ ರೂ. ಜೀವನಾಂಶ ನೀಡುವಂತೆ ಮಾರುತಿಗೆ ಆದೇಶಿಸಿತ್ತು. ಆದರೆ ಜೀವನಾಂಶ ನೀಡಬೇಕಾಗುತ್ತದೆ ಎಂದು ಮಾರುತಿ ಚೌಡಮ್ಮಳನ್ನು ಕೊಲೆ ಮಾಡಿದ್ದ.
ಈ ಪ್ರಕರಣದ ತನಿಖೆ ನಡೆಸಿದ್ದ ಮಾಯಕೊಂಡ ಪೊಲೀಸ್ ವೃತ್ತ ನಿರೀಕ್ಷಕ ಬಿ. ಮಂಜುನಾಥ್ ಅವರು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯ ಅಪರಾಧಿ ಮಾರುತಿಗೆ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಪಿರ್ಯಾದಿ ಪರ ಸರ್ಕಾರಿ ವಕೀಲ ಕೆ.ಎಸ್ ಸತೀಶ್ ನ್ಯಾಯ ಮಂಡಿಸಿದ್ದರು.