ಭಾರೀ ಮಳೆ : ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆ, ಉಕ್ಕಡಗಾತ್ರಿಯಲ್ಲಿ ಸ್ನಾನಘಟ್ಟ, ಅಂಗಡಿಗಳು ಜಲಾವೃತ

ಭಾರೀ ಮಳೆ : ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆ, ಉಕ್ಕಡಗಾತ್ರಿಯಲ್ಲಿ ಸ್ನಾನಘಟ್ಟ, ಅಂಗಡಿಗಳು ಜಲಾವೃತ

ಮಲೇಬೆನ್ನೂರು, ಅ.21- ಕಳೆದ 3-4 ದಿನಗಳಿಂದ ಸುರಿದ ಹಿಂಗಾರು ಮಳೆಯಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ದೇವಸ್ಥಾನದ ಸ್ನಾನಘಟ್ಟ ಮತ್ತು ನದಿ ದಡದಲ್ಲಿದ್ದ ಅಂಗಡಿಗಳು ನದಿ ನೀರಿನಲ್ಲಿ ಮುಳುಗಡೆಯಾಗಿವೆ.

ಭಾನುವಾರ ರಾತ್ರಿ ನದಿ ನೀರಿನಲ್ಲಿ ದಿಢೀರ್‌ ಏರಿಕೆ ಕಂಡಿರುವುದರಿಂದ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ದೇವಸ್ಥಾನದ ಬಳಿ ಭಕ್ತರು ನದಿಗೆ ಇಳಿಯದಂತೆ ಸ್ವಯಂ ಸೇವಕರನ್ನು ನೇಮಿಸಲಾಗಿದೆ ಎಂದು ಗದ್ದಿಗೆ ಟ್ರಸ್ಟ್‌ ಕಮಿಟಿ ಕಾರ್ಯದರ್ಶಿ ಎಸ್‌. ಸುರೇಶ್‌ ತಿಳಿಸಿದ್ದಾರೆ.

ಅಲ್ಲದೇ, ಪೊಲೀಸ್‌ ಇಲಾಖೆಯಿಂದಲೂ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 

ನದಿ ಪಾತ್ರದ ಭತ್ತದ ಗದ್ದೆ, ತೋಟ ನದಿ ನೀರಿನಲ್ಲಿ ಜಲಾವೃತಗೊಂಡಿವೆ. ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಉಪತಹಶೀಲ್ದಾರ್‌ ಆರ್‌. ರವಿ ಮನವಿ ಮಾಡಿದ್ದಾರೆ.

ಹಳ್ಳ-ಕೊಳ್ಳಗಳಿಗೆ ಭಾರೀ ನೀರು

ಭಾರೀ ಮಳೆಯಿಂದಾಗಿ ದೇವರಬೆಳಕೆರೆ ಪಿಕಪ್‌ ಡ್ಯಾಂಗೆ ಸಾಕಷ್ಟು ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣ ನೀರನ್ನು ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಹೊರಗಡೆ ಬರುತ್ತಿರುವುದರಿಂದ ಬ್ಯಾಲದಹಳ್ಳ ಮೈದುಂಬಿ ಹರಿಯುತ್ತಿದೆ.

ಹಳ್ಳಿಗಳಲ್ಲಿ ಹಳ್ಳ ಕೊಳ್ಳಗಳು, ಕಾಲುವೆಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿರುವ ಭತ್ತದ ಗದ್ದೆಗಳು, ತೋಟಗಳು ಜಲಾವೃತಗೊಂಡಿವೆ. ಕೊಮಾರನಹಳ್ಳಿ ಕೆರೆಗೂ ಸಾಕಷ್ಟು ನೀರು ಹರಿದು ಬರುತ್ತಿದ್ದು, ಕೋಡಿ ಮೂಲಕ ಬಾರೀ ಪ್ರಮಾಣದ ನೀರು ಹೋಗುತ್ತಿದೆ.

ಮಳೆ ಪ್ರಮಾಣ

ಭಾನುವಾರ ರಾತ್ರಿ ಮಲೇಬೆನ್ನೂರಿನಲ್ಲಿ 35 ಮಿ.ಮೀ. ಹೊಳೆಸಿರಿಗೆರೆಯಲ್ಲಿ 12 ಮಿ.ಮೀ., ಕೊಂಡಜ್ಜಿಯಲ್ಲಿ 33 ಮಿ.ಮೀ ಮತ್ತು ಹರಿಹರದಲ್ಲಿ 25 ಮಿ.ಮೀ. ಸೇರಿ ಹರಿಹರ ತಾಲ್ಲೂಕಿನಲ್ಲಿ ಒಟ್ಟು ಮಿ.ಮೀ. ಮಳೆ ಸುರಿದಿದೆ.

error: Content is protected !!