ತಡೆಗೋಡೆ ಕುಸಿತ : ಕಳಪೆ ಕಾಮಗಾರಿ ಬಣ್ಣ ಬಯಲು

ತಡೆಗೋಡೆ ಕುಸಿತ : ಕಳಪೆ ಕಾಮಗಾರಿ ಬಣ್ಣ ಬಯಲು

ವೈಜ್ಞಾನಿಕ ಕಾಮಗಾರಿಗೆ ಒತ್ತು ನೀಡುವಂತೆ ಗ್ರಾಮಸ್ಥರ ಕೂಗು

ದಾವಣಗೆರೆ, ಅ.20- ಇಲ್ಲಿನ ಕರೂರು ಮಾರ್ಗವಾಗಿ ದೊಡ್ಡಬಾತಿಗೆ ಹೋಗುವ ಜಿಎಂಐಟಿ ಕಾಲೇಜು ಹಿಂಭಾಗದ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಅಂಡರ್ ಪಾಸ್ ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದ್ದರ ಫಲವಾಗಿ ಮೊನ್ನೆ ಸುರಿದ ಧಾರಾಕಾರ ಮಳೆಗೆ ನೆಲಕಚ್ಚಿದೆ.

ಹೌದು, ಹಲವಾರು ಬಾರಿ ಬಾತಿ ಹಾಗೂ ಕರೂರು ಗ್ರಾಮಸ್ಥರು ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಧ್ವನಿ ಎತ್ತಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಘಟನೆ ನಿದರ್ಶನವಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. 

`ಜನತಾವಾಣಿ’ ಪತ್ರಿಕೆ 2024ರ ಜುಲೈ 19ರಂದು ಈ ಬಗ್ಗೆ ಕಿರು ವರದಿಯನ್ನು ಪ್ರಕಟಿಸಿ, ಅಧಿಕಾರಿಗಳ ಗಮನ ಸೆಳೆದಿದ್ದರೂ ಕಾಮಗಾರಿ ಅವೈಜ್ಞಾನಿಕವಾಗಿಯೇ ತಲೆ ಎತ್ತಿ ನಿಲ್ಲಲು ಪ್ರಯತ್ನಿಸಿತು.

ಪ್ರಸ್ತುತ ನಿರ್ಮಿಸಲಾಗುತ್ತಿರುವ ಕೆಳ ಸೇತುವೆಯಡಿ ಬೈಕ್‌ಗಳು ಮಾತ್ರ ಓಡಾಡಲು ಸಾಧ್ಯವಾಗಿದೆ. ದೊಡ್ಡದಾದ ರಸ್ತೆಯಡಿ ಇಂತಹ ಚಿಕ್ಕದಾದ ಅಂಡರ್‌ ಪಾಸ್ ಮಾಡುವುದರ ಉಪಯೋಗವಾದರೂ ಏನು? ಎಂದು ಸ್ಥಳೀಯರು  ಪ್ರಶ್ನಿಸುತ್ತಿದ್ದಾರೆ.

ವೈಜ್ಞಾನಿಕ ಕಾಮಗಾರಿಗೆ ಒತ್ತು ನೀಡಬೇಕೆಂದು ಆಗ್ರಹಿಸಿದ ಗ್ರಾಮಸ್ಥರು, ಲೋಕಾರ್ಪಣೆಗೂ ಮುನ್ನವೇ ನೆಲ ಕಚ್ಚಿದ ತಡೆಗೋಡೆಯ ಬಗ್ಗೆ ಆಕ್ರೋಶಗೊಂಡಿದ್ದಾರೆ.

ಕಳಪೆ ಕಾಮಗಾರಿಯ ಬಗ್ಗೆ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಕ್ರಮ ಕೈಗೊಂಡು ವೈಜ್ಞಾನಿಕ ಕಾಮಗಾರಿಗೆ ಒತ್ತು ನೀಡುವಂತೆ ಸೂಚಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

error: Content is protected !!