ಭಾರತೀಯರ ಸಂಸ್ಕೃತಿ ಬಿಂಬಿಸುವ ಮಹಾಕಾವ್ಯ `ವಾಲ್ಮೀಕಿ ರಾಮಾಯಣ’

ಭಾರತೀಯರ ಸಂಸ್ಕೃತಿ ಬಿಂಬಿಸುವ ಮಹಾಕಾವ್ಯ `ವಾಲ್ಮೀಕಿ ರಾಮಾಯಣ’

ಹರಪನಹಳ್ಳಿಯ ಹಲವಾಗಲು ಗ್ರಾಮದ ವಾಲ್ಮೀಕಿ ಜಯಂತ್ಯೋತ್ಸವದಲ್ಲಿ ವಾಲ್ಮೀಕಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ

ಹರಪನಹಳ್ಳಿ, ಅ.20- ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣವು ಭಾರತೀ ಯರ ಜೀವನ  ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾ ಕಾವ್ಯವಾಗಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಲವಾಗಲು ಗ್ರಾಮದ ಶ್ರೀ ಬೇಡರ ಕಣ್ಣಪ್ಪ  ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ   ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ   ಶ್ರೀಗಳು ಮಾತನಾಡಿದರು.

ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಸಂತರು ಮತ್ತು ವಿದ್ವಾಂಸರಲ್ಲಿ  ವಾಲ್ಮೀಕಿ ಸಹ ಒಬ್ಬರಾಗಿದ್ದಾರೆ `ಆದಿ ಕವಿ’ ಎಂದು ಕರೆಯಲ್ಪಡುವ  ಅವರು ಪ್ರಾಚೀನ ಭಾರತೀಯ ಸಾಹಿತ್ಯದ ಎರಡು ಮಹಾನ್ ಮಹಾಕಾವ್ಯಗಳಲ್ಲಿ ಒಂದಾದ ರಾಮಾ ಯಣವನ್ನು ರಚಿಸಿದರು.  ವಾಲ್ಮೀಕಿ ಅವರ ಕೆಲಸವು ಹಿಂದೂ ಸಂಸ್ಕೃತಿ ಮತ್ತು ತತ್ವಶಾಸ್ತ್ರದ ಮೇಲೆ ಶಾಶ್ವತವಾದ ಪ್ರಭಾವವನ್ನು ಹೊಂದಿದೆ ಹಾಗೂ ಸಮಾಜದ ನೈತಿಕ ರಚನೆಯನ್ನು ರೂಪಿಸುತ್ತದೆ ಎಂದರು. 

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ವೈ.ಡಿ. ಅಣ್ಣಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,  ವಾಲ್ಮೀಕಿಯವರು ರಾಮಾಯಣದಲ್ಲಿ ಭರತ ಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿಗಳು, ಸರೋವರಗಳು, ಸಮುದ್ರಗಳು ಮತ್ತು ಜಲಪಾತಗಳ ಪ್ರಕೃತಿ ಸೌಂದರ್ಯವನ್ನು ವರ್ಣಿಸಿದ್ದಾರೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ  ಎಂದರು.

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಶಿರಹಟ್ಟಿ ದಂಡೆಪ್ಪ,   ಗೌರವ ಅಧ್ಯಕ್ಷ ಎಚ್.ಕೆ.ಹಾಲೇಶ್ ಮಾತನಾಡಿದರು.    

ಶಿಕ್ಷಕ ಜಿ.ಹನುಮಂತಪ್ಪ ವಿಶೇಷ ಉಪನ್ಯಾಸ ನೀಡಿ, ರಾಮನ ಜೀವನ ಚರಿತ್ರೆಯನ್ನು ಸಂಪೂರ್ಣ ವಾಗಿ ಚಿತ್ರಿಸಿ, ಸೂರ್ಯ ಚಂದ್ರ ಇರುವವರೆಗೆ ಶಾಶ್ವತವಾದ ಹೆಸರನ್ನು ಉಳಿಸಿ, ಆಜರಾಮರವಾಗಿ ರುವ ವಾಲ್ಮೀಕಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಇದೆ ವೇಳೆ ರಾಜ್ಯಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ರಂಗಕಲಾವಿದರಾದ ಸೋಗಿ ನಾಗರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಅಧ್ಯಕ್ಷೆ ಎಚ್.ಟಿ.ವನಜಾಕ್ಷಮ್ಮ, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ. ಶಿಕ್ಷಕ  ಎನ್.ಟಿ.ಸೋಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೋವಿ ಸರಿತ, ಉಪಾಧ್ಯಕ್ಷ ಮೋಟೆಬೆನ್ನೂರು ನಾಗರಾಜ, ಮುಖಂಡರಾದ ತಲಾರಿ ಕರಿಯಪ್ಪ, ಎಂ.ನಿಂಗರಾಜಪ್ಪ, ಗಿಡ್ಡಳ್ಳಿ ನಾಗರಾಜ, ಪೂಜಾರ್ ಅರುಣಕುಮಾರ್, ಎಚ್.ಟಿ.ಶಿವಯೋಗಿ, ಬಾಗಳಿ ಆನಂದಪ್ಪ, ಗಿರಜ್ಜಿ ನಾಗರಾಜ, ಟಿ.ಪದ್ಮಾವತಿ. ತಳವಾರ ಮನೋಜ್, ದೊಡ್ಡಮೂಖಪ್ಪ, ರಾಜಪ್ಪ,  ಅರೆಮಲ್ಲಾಪುರದ ಸುಮಂತ್  ಮತ್ತಿತರರು ಉಪಸ್ಥಿತರಿದ್ದರು.

error: Content is protected !!