‘ವಿಶ್ವ ಆಹಾರ ದಿನಾಚರಣೆ’ ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಡಾ. ಟಿ. ಎನ್. ದೇವರಾಜ್
ದಾವಣಗೆರೆ, ಅ.20- ಬದಲಾಗುತ್ತಿರುವ ಜೀವನ ಶೈಲಿ, ಅತಿಯಾದ ಎಣ್ಣೆ ಪದಾರ್ಥಗಳ ಸೇವನೆ ಹಾಗೂ ಉಪ್ಪು, ಸಕ್ಕರೆಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥ
ಡಾ. ಟಿ. ಎನ್. ದೇವರಾಜ್ ಅಭಿಪ್ರಾಯ ಪಟ್ಟರು.
ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮತ್ತು ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗುಡಾಳು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಆಹಾರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶವು ಒಂದಾನೊಂದು ಕಾಲದಲ್ಲಿ ಅಮೇರಿಕದ ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಈಗ ದೇಶದ ಜನಸಂಖ್ಯೆಗೆ ಬೇಕಾಗುವ ದವಸ ಧಾನ್ಯಗಳನ್ನು ಬೆಳೆಯುವ ಶಕ್ತಿಯನ್ನು ಹೊಂದಿದೆ ಎಂದರು. ನಾವು ದಿನನಿತ್ಯ ಕಾಮನಬಿಲ್ಲಿನ ವರ್ಣಾಧಾರಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ತೋಟಗಾರಿಕೆ ತಜ್ಞ ಎಂ.ಜಿ ಬಸವನಗೌಡ, ಉತ್ತಮ ಜೀವನಕ್ಕಾಗಿ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು ಎಂಬುದು ಈ ವರ್ಷದ ದಿನಾಚರಣೆಯ ಧ್ಯೇಯ ವಾಕ್ಯವಾಗಿದ್ದು, ಆಹಾರ ಭದ್ರತೆಯ ಬಗ್ಗೆ ಅರಿವು ಮೂಡಿಸುವುದು, ಜಾಗತಿಕ ಹಸಿವಿನ ಬಿಕ್ಕಟಿನ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆಹಾರ ಮೂಲ ಭೂತ ಮಾನವನ ಹಕ್ಕು ಆಗಿದೆ ಎಂದು ತಿಳಿಸಿದರು.
ಕೇಂದ್ರದ ಗೃಹ ವಿಜ್ಞಾನಿ ಡಾ. ಸುಪ್ರಿಯಾ ಪಿ. ಪಾಟೀಲ್ ಮಾತನಾಡಿ, ನಮ್ಮ ದೇಶದಲ್ಲಿ ಅಪೌಷ್ಠಿಕತೆ ಹೆಚ್ಚಾಗಿದ್ದು ಅದರಲ್ಲೂ ಸಣ್ಣಮಕ್ಕಳು ತುಂಬಾ ಬಳ ಲುತ್ತಿದ್ದಾರೆ. ನಾವು ಸಮತೋಲನ ಆಹಾರ ಸೇವಿಸು ವುದರಿಂದ ಈ ಅಪೌಷ್ಠಿಕತೆಯನ್ನು ತಡೆಗಟ್ಟಬಹುದೆಂ ದರು. ಶಾಲಾ ಮಕ್ಕಳಿಗೆ ಶರ್ಕರ ಪಿಷ್ಠ, ಸಸಾರಜನಕ, ನಾರು, ಜೀವಸತ್ವ ಮತ್ತು ಖನಿಜ ಲವಣಗಳ ಕೊರ ತೆಯಿಂದಾಗುವ ಸಮಸ್ಯೆಗಳನ್ನು ತಿಳಿಸಿಕೊಟ್ಟರು.
ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕಾರ್ಯದರ್ಶಿ ಸುರೇಶ್ ಮಾತನಾಡಿ, ಮಕ್ಕಳು ಈ ದಿನದ ಮಹತ್ವವನ್ನು ಅರಿತು ತಮ್ಮ ದಿನ ನಿತ್ಯದ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಬೇಕೆಂದರು.