ದಾವಣಗೆರೆ, ಅ.20- ನಗರದ ಕೆಲವು ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿಗಳು ಉದ್ಭವಗೊಂಡಿದ್ದು, ಇದರಿಂದ ವಾಹನ ಸವಾರರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ.
ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ಬಹುತೇಕ ರಸ್ತೆಗಳಲ್ಲಿ ಅಪಾಯಕಾರಿ ಗುಂಡಿಗಳು ಯಮನ ಹುಂಡಿಗಳಾಗಿ ಪರಿವರ್ತನೆಗೊಂಡು ವಾಹನ ಸವಾರರನ್ನು ತಲೆ ಎತ್ತಿ ನೋಡುತ್ತಿವೆ.
ಮಳೆ ಸುರಿದರೆ ಸಾಕು ತಗ್ಗು ಮತ್ತು ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗುಂಡಿಯ ಗಾತ್ರ ತಿಳಿಯದೇ ವಾಹನ ಚಾಲಕರು ಗುಂಡಿಗೆ ಇಳಿಸಿ ಸಂಕಷ್ಟ ಎದುರಿಸುತ್ತಿದ್ದಾರೆ.
ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ವಾಹನಗಳು ನಿಂತ ನೀರಲ್ಲಿ
ರಭಸವಾಗಿ ಹೋದ ಬಳಿಕ ನೀರು ಪಾದಚಾರಿಗಳಿಗೆ ಸಿಡಿಯುತ್ತದೆ ಆದ್ದರಿಂದ ಪಾದಚಾರಿಗಳ ಸಂಚಾರಕ್ಕೂ ರಸ್ತೆ ಗುಂಡಿಗಳು ಅಡಚಣೆಯುಂಟು ಮಾಡುತ್ತಿವೆ.
ಮೊನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಇನ್ನಷ್ಟು ಹದಗೆಟ್ಟಿದ್ದು, ಸ್ಮಾರ್ಟ್ ಸಿಟಿ ಗುರುತಿಗೆ ರಸ್ತೆ ಗುಂಡಿಗಳು ಮಸಿ ಬಳಿಯುತ್ತಿವೆ.
ಅಪಾಯ ಸಂಭವಿಸುವ ಮೊದಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೊಳಿಸಲು ಮುಂದಾಗಬೇಕೆಂದು ವೀರಶೈವ ಸಮಾಜದ ಮುಖಂಡ ಜೆ. ಸೋಮನಾಥ್ ಒತ್ತಾಯಿಸಿದ್ದಾರೆ.