ಹರಿಹರ, ಅ.18- ಪಹಣಿ ನೀಡುವಲ್ಲಿ ವಿಳಂಬ ಮಾಡಿದ ಅಧಿಕಾರಿಯನ್ನು ತಹಶೀಲ್ದಾರ್ ಕಚೇರಿ ಯಲ್ಲಿಯೇ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ತಾಲ್ಲೂಕಿನ ಸಾರಥಿ ಗ್ರಾಮದ ಮಲಕಪ್ಪ ಜಡಿಕೇರ ಎಂಬುವರಿಗೆ ಸೇರಿದ ಒಂದು ಎಕರೆ 22 ಗುಂಟೆ ಜಮೀನನ್ನು ಅವರ ಪತ್ನಿ ಶೋಭಮ್ಮನವರ ಹೆಸರಿಗೆ ಕಂಪ್ಯೂಟರ್ ಪಹಣಿ ಮಾಡಿಕೊಂಡುವಂತೆ ದಿನಾಂಕ 27-7-2019 ರಂದು ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಸರ್ವೇ ಇಲಾಖೆ ಅಧಿಕಾರಿ ಇಬ್ರಾಹಿಂ ಎಂಬುವವರ ಗಮನಕ್ಕೆ ತಂದಾಗ ಅವರು ಒಂದು ಬಾರಿ ಸ್ಥಳಕ್ಕೆ ಭೇಟಿ ಕೊಟ್ಟು ತದನಂತರ, ಸಬೂಬು ಹೇಳಿಕೊಂಡು ಸತಾಯಿಸುತ್ತಾ ದಿನವನ್ನು ತಳ್ಳುತ್ತಾ ಕಾಲ ಹರಣ ಮಾಡಿಕೊಂಡು ಬಂದಿದ್ದು, ಇವತ್ತು ಕೂಡಾ ಮಳೆ ಬಂದಿದೆ. ಇನ್ನೂ ಹದಿನೈದು ದಿನದ ನಂತರ ಬಂದು ಸರ್ವೆ ಮಾಡಿಕೊಡುವುದಾಗಿ ಹೇಳುತ್ತಿದ್ದಾರೆ ಎಂದು ಸಾರಥಿ ರೇಖಾ ಹೇಳಿದರು.
ಹಾಗಾಗಿ ಶೋಭಮ್ಮ ಮತ್ತು ಮಕ್ಕಳು ಆಕ್ಷೇಪ ವ್ಯಕ್ತಪಡಿಸಿ ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ದೂರು ಸಲ್ಲಿಸಿ, ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದಾಗ ದಾಖಲೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ನಮಗೆ ಚಿಕ್ಕ ಚಿಕ್ಕ ಮಕ್ಕಳನ್ನು ಹೊತ್ತುಕೊಂಡು ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ನೀಡದಿದ್ದರೆ ಕಚೇರಿ ಮುಂದೆ ಹೋರಾಟ ನಡೆಸುವುದಾಗಿ ಶೋಭಮ್ಮ ಹೇಳಿದರು. ಈ ಸಂದರ್ಭದಲ್ಲಿ ನೇತ್ರಾವತಿ, ಬೇವಿನಹಳ್ಳಿ ರುದ್ರಪ್ಪ ಇತರರು ಹಾಜರಿದ್ದರು.