ಕವಿ, ಕಥೆಗಾರ ಬಿ. ಶ್ರೀನಿವಾಸ್‌ ಅವರಿಗೆ `ನಿರಂತರ ಸಾಹಿತ್ಯ ಪುರಸ್ಕಾರ’

ಕವಿ, ಕಥೆಗಾರ ಬಿ. ಶ್ರೀನಿವಾಸ್‌ ಅವರಿಗೆ `ನಿರಂತರ ಸಾಹಿತ್ಯ ಪುರಸ್ಕಾರ’

ದಾವಣಗೆರೆ, ಅ.18- ಗದಗ ಜಿಲ್ಲೆಯ ನಿರಂತರ ಪ್ರಕಾಶನದ  ವತಿಯಿಂದ ಪ್ರತಿ ವರ್ಷ ಪ್ರತಿಭಾನ್ವಿತ ಸಾಹಿತಿಗಳಿಗೆ ಕೊಡಮಾಡುವ `ನಿರಂತರ ಸಾಹಿತ್ಯ ಪುರಸ್ಕಾರ’ ಕ್ಕೆ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಯೂ ಆಗಿರುವ ಕವಿ – ಕಥೆಗಾರ ಬಿ. ಶ್ರೀನಿವಾಸ್ ಭಾಜನರಾಗಿದ್ದಾರೆ.

ನಿರಂತರ ಪ್ರಕಾಶನ (ಗದಗ), ಸಾಹಿತಿ – ಕಲಾವಿದರ ಬಳಗ (ಹಾವೇರಿ), ನೈಸ್ ಅಕಾಡೆಮಿ (ಹಾವೇರಿ) ಇವರ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 20ರ ಭಾನುವಾರ ಬೆಳಿಗ್ಗೆ 10.30ಕ್ಕೆ ಹಾವೇರಿ ನಗರದ ನೈಸ್ ಅಕಾಡೆಮಿ ಸಭಾಂಗಣದಲ್ಲಿ ಏರ್ಪಾಡಾಗಿರುವ ಸಮಾರಂಭದಲ್ಲಿ ಬಿ. ಶ್ರೀನಿವಾಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿರುವ ಸಮಾರಂಭದಲ್ಲಿ ಹಿರಿಯ ಬಂಡಾಯ ಸಾಹಿತಿ ಸತೀಶ್ ಕುಲಕರ್ಣಿ ಅವರು ಬಿ. ಶ್ರೀನಿವಾಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.

ಕವಿ – ಉಪನ್ಯಾಸಕ ರಮಜಾನ್ ಹೆಬಸೂರು ಅವರು ಪ್ರಶಸ್ತಿ ಪುರಸ್ಕೃತರ ಕುರಿತಂತೆ ಮಾತನಾಡುವರು. ನಿರಂತರ ಪ್ರಕಾಶನ (ಗದಗ)ದ ಸಾಹಿತಿ ಎ.ಎಸ್. ಮಕಾನದಾರ ಉಪಸ್ಥಿತರಿರುವರು.

ಜಾನಪದ ವಿದ್ವಾಂಸ ಶಂಭು ಬಳಿಗಾರ, ಹಾವೇರಿಯ ಪದವಿ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಮಹಾದೇವಿ ಕಣವಿ, ಆನವಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹೆಚ್.ಜಿ. ಅರುಣ್ ಕುಮಾರ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಂಕ್ಷಿಪ್ತ ಪರಿಚಯ : ಬಳ್ಳಾರಿ ಜಿಲ್ಲೆಯ (ಈಗಿನ ವಿಜಯನಗರ ಜಿಲ್ಲೆ) ಕೂಡ್ಲಿಗಿಯವರಾದ ಬಿ.ಶ್ರೀನಿವಾಸ್ ಅವರು ಪದವಿ ಪಡೆದಿದ್ದು ಹೊಸಪೇಟೆಯಲ್ಲಿ. ಕಲಬುರ್ಗಿ ವಿಶ್ವವಿದ್ಯಾನಿಲಯದಿಂದ ನ್ಯೂಕ್ಲಿಯರ್ ಫಿಸಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು ವಿಜ್ಞಾನಿಯಾಗಬೇಕೆಂದು ಹಂಬಲಿಸಿದವರು. ಆದರೆ, ಬದುಕಿನ ಅನಿವಾರ್ಯತೆಗಳಿಂದಾಗಿ ಕೆಲಕಾಲ ಭೌತವಿಜ್ಞಾನದ ಅಧ್ಯಾಪಕರಾಗಿದ್ದರು. 

ಪ್ರಗತಿಪರ ಚಿಂತಕರೂ ಆಗಿರುವ ಶ್ರೀನಿವಾಸ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಗಾಗಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕಾಣದಾಯಿತೋ ಊರು ಕೇರಿ (ಕಥಾ ಸಂಕಲನ), ಉರಿವ ಒಲೆಯ ಮುಂದೆ (ಕವನ ಸಂಕಲನ), ಪುರೋಹಿತಶಾಹಿ ಮತ್ತು ಗುಲಾಮಗಿರಿ (ಅನುವಾದ) ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು (ನ್ಯಾನೋ ಕಥೆಗಳು), ಖೈರ್ಲಾಂಜಿ (ಅನುವಾದದ ಸಹಭಾಗಿ), ಹಾವೇರಿ ನ್ಯಾಯ, ಸಂಚಲನೆ (ಸಂಪಾದನಾ ಕೃತಿಗಳು) ಹಾಗೂ ಪದೋನ್ನತಿ (ಈ ಕೃತಿಯು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಅತ್ಯುಪಯುಕ್ತ ಸೇವಾ ಮಾಹಿತಿಯುಳ್ಳ ಕೃತಿಯಾಗಿದೆ ಎಂದು ಪ್ರಶಂಸೆಗೆ ಒಳಪಟ್ಟಿದೆ) ಇದುವರೆಗೆ ಪ್ರಕಟವಾಗಿರುವ ಪುಸ್ತಕಗಳು.

ಬಿಸಿಲ ಮಳೆ (ಕಾವ್ಯಾವಲೋಕನ), ಸೊಂಡೂರಿನ ಕಗ್ಗತ್ತಲೆಯ ಕಥನಗಳು, ಸಾಮಾಜಿಕ ನ್ಯಾಯದ ಸಾಕ್ಷಿಪ್ರಜ್ಞೆ-ಎಲ್.ಜಿ.ಹಾವನೂರು, ಕೇಶವಾನಂದ ಭಾರತಿ ಮತ್ತು ಭಾರತ (ನ್ಯಾಯಾಂಗದ ಐತಿಹಾಸಿಕ ತೀರ್ಪು) ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳಾಗಿವೆ.

error: Content is protected !!