ಕೊಮಾರನಹಳ್ಳಿ ಕೆರೆಯಲ್ಲಿ ಅದ್ಧೂರಿ ತೆಪ್ಪೋತ್ಸವ

ಕೊಮಾರನಹಳ್ಳಿ ಕೆರೆಯಲ್ಲಿ ಅದ್ಧೂರಿ ತೆಪ್ಪೋತ್ಸವ

ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ದಿವಾಳಿಯಾಗುವ ಆತಂಕ : ಶಾಸಕ ಹರೀಶ್‌

ಮಲೇಬೆನ್ನೂರು, ಅ.21- ಭರ್ತಿಯಾಗಿ ಕೋಡಿ ಬಿದ್ದಿರುವ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ 97 ಎಕರೆ ವಿಸ್ತೀರ್ಣದ ಕೆರೆಗೆ ಶಾಸಕ ಬಿ.ಪಿ. ಹರೀಶ್‌ ಅವರು ಸೋಮವಾರ ಗ್ರಾಮಸ್ಥರ ಸಮ್ಮುಖದಲ್ಲಿ ಗಂಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಇದಕ್ಕೂ ಮುನ್ನ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಹರೀಶ್‌ ಅವರು ನಾಡಿನಲ್ಲಿ ಪ್ರತಿ ವರ್ಷ ಮಳೆ-ಬೆಳೆ ಸಮೃದ್ಧಿಯಾಗಿರಲೆಂದು ದೇವರಲ್ಲಿ ಪ್ರಾರ್ಥಿಸಿದರು.

ಬಾಗಿನ ಅರ್ಪಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಶಾಸಕರು, ಈ ಭಾಗದ ದೊಡ್ಡ ಕೆರೆಯಾಗಿರುವ ಕೊಮಾರನಹಳ್ಳಿ ಕೆರೆ ಭರ್ತಿಯಾಗಿರುವ ಈ ಶುಭ ಸಂದರ್ಭದಲ್ಲಿ ಗ್ರಾಮಸ್ಥರ ಆಶಯದಂತೆ ತೆಪ್ಪೋತ್ಸವವನ್ನು ತಾಲ್ಲೂಕು ಆಡಳಿತದಿಂದ ಶೀಘ್ರವಾಗಿ ಅದ್ಧೂರಿ ಯಿಂದ ಆಚರಿಸಲಾಗುವುದು. ಈ ಬಗ್ಗೆ ಗ್ರಾಮಸ್ಥರು ಮತ್ತು ಅಧಿಕಾರಿಗಳು ಸಭೆ ನಡೆಸಿ ಚರ್ಚಿಸುವಂತೆ ಸೂಚಿಸಿದರು. 2009 ರಲ್ಲಿ ನಾನು ಮೊದಲ ಬಾರಿಗೆ ಶಾಸಕನಾಗಿದ್ದಾಗ ಅದ್ಧೂರಿ ತೆಪ್ಪೋತ್ಸವ ಆಚರಿಸಿದ್ದೆವು. ಇದೀಗ ಮತ್ತೆ ಆ ಅವಕಾಶ ನನಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದ ಅವರು, ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಈ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಬೇಕೆಂಬ ಉದ್ದೇಶ ಇದೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕುಂಠಿತಗೊಂಡಿವೆ ಎಂದರು.

ಕಾಂಗ್ರೆಸ್‌ ಶಾಸಕ ರಾಜು ಕಾಗೆ ಅವರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿ ಸಲು ಅನುದಾನ ನೀಡದಿರುವ ಬಗ್ಗೆ ಬಹಿರಂಗ ವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕರ ಗತಿಯೇ ಈಗಿರುವಾಗ ಇನ್ನು ವಿರೋಧ ಪಕ್ಷದ ಶಾಸಕರಾದ ನಮ್ಮ ಗತಿ ಏನಾಗಿರಬೇಡ ನೀವೇ ಯೋಚಿಸಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಹರೀಶ್ ಉತ್ತರಿಸಿದರು.

ರಾಜ್ಯದ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಪ್ರಯಾಣಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಈಗ ರಾಜ್ಯದಲ್ಲಿ ಮಳೆ ಸುರಿಯುತ್ತಿರುವುದರಿಂದ ರಸ್ತೆಯಲ್ಲಿ ಗುಂಡಿಗಳು ಮತ್ತಷ್ಟು ಹೆಚ್ಚಾಗಿವೆ. ಮುಡಾ ಹಗರಣದ ಗೊಂದಲದಲ್ಲೇ ಇರುವ ಸಿಎಂ ಸಿದ್ದರಾಮಯ್ಯ ಅವರು ಅಭಿವೃದ್ದಿ ಕಡೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ದೂರಿದ ಶಾಸಕ ಹರೀಶ್‌ ಅವರು, ವಾಲ್ಮೀಕಿ ನಿಗಮದಲ್ಲಿ ಆಗಿರುವ ಅವ್ಯವಹಾರವನ್ನು ಇನ್ನೂ ಸರಿಪಡಿಸಿಲ್ಲ, ಆ ನಿಗಮದಲ್ಲಿ ಜನರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಠಿಯಲ್ಲಿ ತೊಡಗಿದ್ದರೆ, ಸಿಎಂ ಸಿದ್ದರಾಮಯ್ಯ ಅವರು, ಚೀಪ್‌ ಪಾಪುಲಾರ್ಟಿ ಯೋಜನೆಗಳ ಮೂಲಕ ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಹರೀಶ್‌ ಬೇಸರ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ಗುರುಬಸವರಾಜ್‌, ಉಪತಹಶೀಲ್ದಾರ್‌ ಆರ್‌. ರವಿ, ಕಂದಾಯ ನಿರೀಕ್ಷಕ ಆನಂದ, ಗ್ರಾಮ ಅಧಿಕಾರಿ ಅಣ್ಣಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್‌, ತಾ.ಗ್ರಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣಪ್ಪ, ಗ್ರಾ.ಪಂ. ಸದಸ್ಯರಾದ ಮಡಿವಾಳರ ಬಸವರಾಜ್‌, ಹನುಮಂತು, ಹಾಲಿವಾಣದ ಮೋಹನ್‌, ಡಿ.ಡಿ. ಚಿಕ್ಕಣ್ಣ, ಹನುಮಂತಗೌಡ, ಕೊಪ್ಪದ ಚಂದ್ರಪ್ಪ, ಸಂತೋಷ್‌, ಗ್ರಾ.ಪಂ. ಮಾಜಿ ಅಧ್ಯಕ್ಷ ದಾನಪ್ಳ ಹನುಮಂತಪ್ಪ, ಮಲೇಬೆನ್ನೂರು ಪುರಸಭೆ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್‌, ಜಿಗಳೇರ ಹಾಲೇಶಪ್ಪ, ಪಾನಿಪೂರಿ ರಂಗಣ್ಣ, ಭೋವಿ ಮಂಜಣ್ಣ, ಜಿಗಳಿ ಹನುಮಗೌಡ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

error: Content is protected !!