ಹರಿಹರ, ಅ.17- ನಗರದ ಪ್ರಗತಿಪರ ಬರಹಗಾರರ ಒಕ್ಕೂಟ ಹಾಗೂ ಚಿಂತನ ಪ್ರತಿಷ್ಠಾನ ಇವರ ಸಹಯೋಗ ದೊಂದಿಗೆ ಲಲಿತಮ್ಮ ಡಾ ಚಂದ್ರಶೇಖರ್ ಅವರ 93ನೇ ಜನ್ಮ ದಿನದ ಅಂಗವಾಗಿ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಬಾ.ಮ. ಬಸವರಾಜಯ್ಯನವರಿಗೆ ಲಲಿತಮ್ಮ ಡಾ ಚಂದ್ರಶೇಖರ್ ಜೀವಮಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಇದೇ ದಿನಾಂಕ 20 ರ ಭಾನುವಾರ ಬೆಳಗ್ಗೆ 10.30 ಕ್ಕೆ ಬಿರ್ಲಾ ಚೌಟ್ರಿಯಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಪ್ರಗತಿಪರ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ 5 ದಶಕಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ಸಾಹಿತ್ಯ, ರಾಜಕೀಯ, ರಂಗಭೂಮಿ, ಸಾಂಸ್ಕೃತಿಕ ಮತ್ತು ಪತ್ರಕರ್ತರಾಗಿ ಕ್ರಿಯಾಶೀಲರಾಗಿ ಸಾಮಾಜಿಕ ಸೇವೆ ಮಾಡುತ್ತಾ ಬಂದಿರುವ ಬಾ.ಮ. ಬಸವರಾಜಯ್ಯನವರ ಸೇವಾ ಕ್ಷೇತ್ರದ ಆದರ್ಶಗಳು ಮುಂದಿನ ಪೀಳಿಗೆಗೆ ಮತ್ತು ಯುವ ಜನರಿಗೆ ಮಾರ್ಗದರ್ಶಕವಾಗಲೆಂದು ಲಲಿತಮ್ಮ ಡಾ. ಚಂದ್ರಶೇಖರ್ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಜೊತೆಗೆ ಶ್ರೀಮತಿ ಶ್ಯಾಮಲದೇವಿ ಇವರ ಭೂಮಿ ತೂಕದ ತಾಯಿ ಪುಸ್ತಕ ಬಿಡುಗಡೆ ಮತ್ತು ಸುವರ್ಣ ಕವಿ ಕಾವ್ಯ ಸಿರಿ ಕವಿಗೋಷ್ಠಿಯನ್ನೂ ಆಯೋಜಿಸಲಾಗಿದೆ ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ರಾಮಕೃಷ್ಣ ಆಶ್ರಮದ ಶಾರದೇಶಾನಂದಜೀ ವಹಿಸಲಿದ್ದಾರೆ. ಗೌರವ ಉಪಸ್ಥಿತಿ ಲಲಿತಮ್ಮ ಡಾ. ಚಂದ್ರಶೇಖರ್, ಅಧ್ಯಕ್ಷತೆಯನ್ನು ಪ್ರಗತಿಪರ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ, ಅಭಿನಂದನಾ ನುಡಿ ಹಿರಿಯ ಸಾಹಿತಿ ಪ್ರೊ ಸಿ.ವಿ. ಪಾಟೀಲ್ ಮಾತನಾಡಲಿದ್ದಾರೆ.
ಸುವರ್ಣ ಕವಿ ಕಾವ್ಯ ಸಿರಿ ಕವಿಗೋಷ್ಠಿಯನ್ನು ಪತ್ರಕರ್ತ ಬಿ.ಎನ್. ಮಲ್ಲೇಶ್ ಉದ್ಘಾಟಿಸಲಿದ್ದಾರೆ. ಸಾಹಿತಿ ಸೀತಾ ನಾರಾಯಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಗೋವಿಂದರಡ್ಡಿ, ವಸಂತಿ ಡಾ. ಫ್ರಾನ್ಸಿಸ್, ಹೆಚ್.ಕೆ. ಕೊಟ್ರಪ್ಪ ಇತರರು ಭಾಗವಹಿಸಲಿದ್ದು, 31 ಜನರು ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಗತಿಪರ ಒಕ್ಕೂಟದ ಗೌರವ ಅಧ್ಯಕ್ಷ ಹೆಚ್.ಕೆ. ಕೊಟ್ರಪ್ಪ, ಉಪಾಧ್ಯಕ್ಷೆ ಬಿ. ನಾಗರತಮ್ಮ, ಕಾರ್ಯದರ್ಶಿ ಡಿ. ಫ್ರಾನ್ಸಿಸ್ ಕ್ಸೇವಿಯರ್, ಖಜಾಂಚಿ ಎ.ಬಿ. ಮಂಜಮ್ಮ, ಸೀತಾ ನಾರಾಯಣ, ಚಂದನಾ ವೈ. ನೀ. ಮಂಜುನಾಥ್ ಅಗಡಿ, ಶಾಮಲಾ ದೇವಿ, ರಾಧಾ ಹನುಮಂತಪ್ಪ ಇ., ಉಷಾ, ಜಯರಾಮನ್, ಜಿ.ಎಸ್. ಗಾಯತ್ರಿ ಇತರರು ಹಾಜರಿದ್ದರು.