ಕಲೆ, ಸಾಹಿತ್ಯ, ನೃತ್ಯ, ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ಕೋಲಾಟ, ವೀರಗಾಸೆ, ನಂದಿಕೋಲು ಕುಣಿತ, ನಾಟಕ, ಬಯಲಾಟ, ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ಯಕ್ಷಗಾನ, ಗೊಂಬೆ ಯಾಟ ಮುಂತಾದ ವಿವಿಧ ಪ್ರಕಾರ ಗಳನ್ನೊಳಗೊಂಡ ನಮ್ಮ ಜನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ಇಲ್ಲಿನ ಗೀತೆಗಳು ವೈವಿಧ್ಯತೆಯಿಂದ ಕೂಡಿದವಾಗಿವೆ.
ಈ ವೈವಿದ್ಯತೆಯ ಸೊಗಡನ್ನು ಮೈಗೂಡಿಸಿಕೊಂಡು ನಾಡು, ಹೊರನಾಡಿನಲ್ಲೆಲ್ಲ ಸಂಚರಿಸಿ ಅದರ ಕಂಪನ್ನ ಹರಡುವಲ್ಲಿ ಸದಾ ನಿರತರಾಗಿರುವ ರಾಣೇಬೆನ್ನೂರು ತಾಲ್ಲೂಕು ಎಕಲಾಸಪುರದ ಪರಶುರಾಮ ಬಣಕಾರ ಅವರದ್ದು ಬಹುಮುಖ ಪ್ರತಿಭೆ. ಗೀ ಗೀ ಪದಗಳು, ಲಾವಣಿ ಪದಗಳು, ಬೀದಿ ನಾಟಕಗಳು, ಜೊತೆಗೆ ಇವರೇ ರಚಿಸುವ ಕುಟುಂಬದ ಸಾಮರಸ್ಯಕ್ಕೆ ಪೂರಕ ಗೀತೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜನಪರ ಯೋಜನೆಗಳಿಗೆ ರಾಗ ಸಂಯೋಜನೆ ಮಾಡಿ ಪ್ರಚುರಪಡಿ ಸುವುದು. ಇವರು ಕಟ್ಟಿ ಬೆಳೆಸುತ್ತಿರುವ ಜನನಿ ಜಾನಪದ ವೇದಿಕೆಯ ಕಾರ್ಯಕ್ರಮಗಳಲ್ಲಿರುತ್ತವೆ.
ಕಣ್ಣಿಟ್ಟ ಖಳನಾಯಕ, ರೊಚ್ಚಿಗೆದ್ದ ಬಡವ, ಹುಬ್ಬಳ್ಳಿ ಹುಲಿ, ಪ್ರಚಂಡ ಪರಶುರಾಮ, ರಕ್ತ ಕಂಡ ರಣಧೀರ, ಅಣ್ಣನ ಅರಮನೆ, ಮಾತುಕೊಟ್ಟ ಮೈಲಾರಿ, ಕರಿಯ ಸಿಡಿದೆದ್ದರೆ ಪ್ರಳಯ, ರಂಟಿ ಹಿಡಿದ ಒಂಟಿ ಸಲಗ, ತಂಗಿಗಾಗಿ ತವರು, ಬಯಲು ಸೀಮೆ ಬಹಾದ್ದೂರ ಸೇರಿದಂತೆ 15 ನಾಟಕಗಳನ್ನು ರಚಿಸಿ ಮುದ್ರಿಸಿದ್ದು, ಅವು ನಾಡಿನಲ್ಲಿ ಹತ್ತಾರು ಪ್ರದರ್ಶನಗಳನ್ನು ಕಂಡಿವೆ ಎನ್ನುವುದು ಪರಶುರಾಮ ಬಣಕಾರರ ಹೆಗ್ಗಳಿಕೆ.
`ಜನಪದ ರತ್ನ’ ರಾಜ್ಯ ಪ್ರಶಸ್ತಿ, ಜಿಲ್ಲಾ ಯುವ
ಪ್ರಶಸ್ತಿ ಜೊತೆಗೆ ವಿವಿಧ ಸಂಘಟನೆಗಳ ಸಾಹಿತ್ಯ ಶ್ರೀ, ನಾಟಕ ರತ್ನ, ವೃತ್ತಿ ಚೈತನ್ಯ ಶ್ರೀ ಮುಂತಾದ ಪುರಸ್ಕಾರ ಗಳನ್ನು ಪಡೆದಿರುವ ರಂಗಕರ್ಮಿ ಪರಶುರಾಮ ಬಣಕಾರ ಅವರು, ಜಾನಪದ ಕಲಾವಿದರಾದ ಬಸವರಾಜ ಕೊಳಜಿ, ಗುರುನಾಥ ಹುಬ್ಬಳ್ಳಿ ಹಾಗೂ ಬಹುಪ್ರತಿಭೆಗಳ ತವರು, ನೆರೆಯ ಅರೆಮಲ್ಲಾ ಪುರ ಗ್ರಾಮದ ಡಾ. ಕೆ.ಸಿ.ನಾಗರಜ್ಜಿ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಬಣಕಾರ ಬೆಳವಣಿಗೆಗೆ ಸಾತ್ ನೀಡಿವೆ.
-ಮನೋಹರ ಮಲ್ಲಾಡದ