ಶ್ರೀ ಜಯದೇವ ಶ್ರೀಗಳ 150ನೇ ಜಯಂತ್ಯೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಡಾ. ವೀರಭದ್ರ ಚನ್ನಮಲ್ಲ ಸ್ವಾಮೀಜಿ
ಮಹಾದಾನಿಗಳಿಗೆ ಗೌರವ
ಸಮಾರಂಭದಲ್ಲಿ ಮಹಾದಾನಿಗಳಾದ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಅಂಬಲಿ ಚನ್ನಬಸಪ್ಪನವರ ಸುಪುತ್ರ ಎ.ಸಿ.ಷಡಕ್ಷರಿ, ನಿವೃತ್ತ ಇಂಜಿನಿಯರ್ ಎಸ್. ಚನ್ನವೀರಪ್ಪ, ದಾವಣಗೆರೆಯ ಜಯದೇವ ಪ್ರೆಸ್ ಮಾಲೀಕ ಕಣಕುಪ್ಪಿ ಮುರುಗೇಶಪ್ಪ, ದಾವಣಗೆರೆಯ ವರ್ತಕ ಮುರುಘರಾಜೇಂದ್ರ ಚಿಗಟೇರಿ ಅವರುಗಳನ್ನು ಸನ್ಮಾನಿಸಲಾಯಿತು.
ಚಿತ್ರದುರ್ಗ, ಅ.13- ಕೆಲವು ಅಂಶ ಗಳನ್ನು ಚಾರಿತ್ರ್ಯಿಕ ನೆಲೆಯೊಳಗೆ ಗ್ರಹಿಸಬೇ ಕಾಗುತ್ತದೆ. ಪೀಠ ಪರಂಪರೆಯ ಮಠಗಳಲ್ಲಿ ಹೆಚ್ಚು ಜ್ಞಾನಿಗಳು, ಹೆಚ್ಚು ಕ್ರಿಯಾಶೀಲರು, ಸಮಾಜಮುಖಿಯಾಗಿ ಆಲೋಚಿಸಿದವರು ಜಯದೇವ ಜಗದ್ಗುರುಗಳು. ಕರ್ನಾಟಕದಲ್ಲಿ ಮೊದಲು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದವರು ಜಯದೇವ ಜಗದ್ಗುರುಗಳು ಎಂದು ಬೆಂಗಳೂರಿನ ನಿಡುಮಾಮಿಡಿ ಮಠದ ಡಾ.ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಮುರುಘಾ ಮಠದಿಂದ ಇಲ್ಲಿನ ಅನುಭವ ಮಂಟಪದಲ್ಲಿ ಮೊನ್ನೆ ಏರ್ಪಾಡಾಗಿದ್ದ ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತ್ಯೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಜಯದೇವ ಜಗದ್ಗುರುಗಳು ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರು. ಅವರ ವ್ಯಕ್ತಿತ್ವ, ವಿದ್ವತ್ತು ಆಯಸ್ಕಾಂತ ಇದ್ದ ಹಾಗೆ ಇತ್ತು. ಜಯದೇವ ಶ್ರೀಗಳ ಕಾಲಮಾನ ಕೇವಲ ಮುರುಘಾ ಮಠಕ್ಕೆ ಸೀಮಿತವಾಗಿರಲಿಲ್ಲ. ಅವರ 150ನೇ ಜಯಂತ್ಯೋತ್ಸವವನ್ನು ಶ್ರೀಮಠದ ಆಡಳಿತ ಮಂಡಳಿ ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ನುಡಿದರು.
ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಸ್ವಾಮಿಗಳು ಮಾತನಾಡಿ, ಜಯದೇವಶ್ರೀ ಕಾಲದ ಮಹಾಬೆಳಕಾಗಿ ಬಂದವರು. ಅವರಿಗೆ ಪ್ರೇರಣೆ ಯಾಗಿ ಬಂದವರು ಅಥಣಿ ಶ್ರೀಗಳು. ಅಂದಿನ ಕಾಲದಲ್ಲಿ ಪೀಠಾಧಿಪತಿಗಳೆಂದರೆ ಗರ್ಭದಲ್ಲಿರುವ ಶಿಶುವಿನಂತೆ. ಜನರಿಗೆ ದರ್ಶನ ಭಾಗ್ಯ ಅಪರೂಪವಾಗಿತ್ತು.
ಈ ಸಂದರ್ಭದಲ್ಲಿ ಜಯದೇವ ಶ್ರೀಗಳು ತಮ್ಮ ಗುರುಗಳ ಆದೇಶದಂತೆ ಸುತ್ತು ಮತ್ತು ಕಟ್ಟು ಎಂಬಂತೆ ಮಠವನ್ನು ಬಿಟ್ಟು ಸಮಾಜವನ್ನು ಕಟ್ಟಲು ಸುತ್ತಿದರು. ಶಿಕ್ಷಣ, ಊಟ, ವಸತಿಗೆ ಜಯದೇವ ಶ್ರೀಗಳು ಹೆಚ್ಚು ಒತ್ತು ಕೊಟ್ಟರು. ಜಯದೇವ ಶ್ರೀಗಳ ಬಗ್ಗೆ ಮಾತನಾಡಿದರೆ ಮಾತು ಮೌನವಾಗುತ್ತದೆ. ಅವರು ಮತ್ತಷ್ಟು ಎತ್ತರದಲ್ಲಿ ಕಾಣಿಸುತ್ತಾರೆ ಎಂದು ನುಡಿದರು.
ಬೀದರ್ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ್ ಧನ್ನೂರು ಮಾತನಾಡಿ, ಬಸವಣ್ಣನವರು ತಮ್ಮ ವಚನಗಳಲ್ಲಿ ಅನೇಕ ಬಾರಿ ಹೇಳಿದ್ದಾರೆ. ನಮ್ಮ ಕೂಡಲ ಸಂಗಮದ ಶರಣರನ್ನು ಹೋಲಿಕೆ ಮಾಡಲು ಪ್ರತಿಯಿಲ್ಲ. ಪೂಜ್ಯರಾದ ಜಯದೇವ ಶ್ರೀಗಳಿಗೆ ಈ ಮಾತು ಅನ್ವಯ ವಾಗುತ್ತದೆ. ಶ್ರೀಗಳು ಉಪಮಾತೀತರು. ಅವರಿಗೆ ಅವರೇ ಸಾಟಿ. ದೇವರು ನಮಗೆ ಜ್ಞಾನ ಮತ್ತು ಸಾಮರ್ಥ್ಯ ನೀಡಿದ್ದಾನೆ. ಜ್ಞಾನ ನಮಗಾಗಿ ಬಳಸಬೇಕು. ಸಾಮರ್ಥ್ಯವನ್ನು ಇತರರ ಒಳಿತಿಗಾಗಿ ಬಳಸಬೇಕು.
ನದಿ ಹರಿದು ಭೂಮಿಯನ್ನು ಫಲವತ್ತಾಗಿ ಮಾಡುತ್ತದೆ. ಮಾವಿನಗಿಡ ಸಾವಿರಾರು ಹಣ್ಣು ಬಿಟ್ಟು ಮಾನವನಿಗೆ ಕೊಡುಗೆ ನೀಡುವಂತೆ ನಾವು ನಮ್ಮ ಸಾಮರ್ಥ್ಯವನ್ನು ಬಳಸಬೇಕು. ಆದರೆ ನಾವು ಜ್ಞಾನ ಮತ್ತು ಸಾಮರ್ಥ್ಯವನ್ನು ಸಾರ್ಥಕ್ಕಾಗಿ ಬಳಸುತ್ತಿದ್ದೇವೆ. ಜಯದೇವ ಶ್ರೀಗಳು ತಮ್ಮ ಸಾಮರ್ಥ್ಯವನ್ನು ಸಮಾಜಕ್ಕೆ ಧಾರೆಯೆರೆದರು.
ಶರಣಸಂಸ್ಕೃತಿ ವಿಶಿಷ್ಟ ಹಾಗು ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಕೃತಿ. ಮಾನವೀಯ ಸಂಸ್ಕೃತಿ ಶರಣ ಸಂಸ್ಕೃತಿ. ಶ್ರೀಮಠ ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಬಸವಣ್ಣನವರ ಜ್ಯೋತಿ ನಿರಂತರವಾಗಿ ಬೆಳಗುತ್ತಿರಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ತಮಿಳುನಾಡು ಜಂಗಮ ಮಠದ ಶ್ರೀ ಸಿದ್ಧಲಿಂಗ ಮಹಾ ಸ್ವಾಮಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು, ಶಾಸಕರಾದ ಕೆ.ಸಿ.ವೀರೇಂದ್ರ (ಪಪ್ಪಿ), ಕೆ.ಎಂ. ವೀರೇಶ್, ತಿಪಟೂರಿನ ಶ್ರೀ ಜಯದೇವ ವಿದ್ಯಾರ್ಥಿನಿಲಯದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಂಭ್ರಮದಲ್ಲಿ ಹೆಸರಾಂತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಾನಯೋಗಿ ಬಳಗದವರು ಜಯದೇವ ಜಗದ್ಗುರುಗಳ ಜೀವನಧಾರಿತ ಜಯದೀಪ ಜ್ಯೋತಿ ರೂಪಕ ನಡೆಸಿಕೊಟ್ಟರು.