ರಾಣೇಬೆನ್ನೂರು : ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ವ್ಯವಸ್ಥೆ

ರಾಣೇಬೆನ್ನೂರು : ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ವ್ಯವಸ್ಥೆ

ರಾಣೇಬೆನ್ನೂರು : ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ವ್ಯವಸ್ಥೆ - Janathavaniನಮ್ಮ ಕ್ಷೇತ್ರವನ್ನು ಪ್ರವಾಸಿ ಕೇಂದ್ರವಾಗಿಸುವ ಕನಸು…

`ನಮ್ಮ ಕ್ಷೇತ್ರದಲ್ಲಿರುವ ಬೆಟ್ಟದ ಮಲ್ಲಯ್ಯ ತಾಣದ ಜೊತೆಗೆ, ಎಲ್ಲ ವೀಕ್ಷಣಾ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರವನ್ನಾಗಿಸುವ ಕನಸಿನೊಂದಿಗೆ ಸಫಾರಿ ವಾಹನಕ್ಕೆ ಅನುದಾನ ನೀಡಿರುವೆ’

 ಪ್ರಕಾಶ ಕೋಳಿವಾಡ, 

ಶಾಸಕರು, ರಾಣೇಬೆನ್ನೂರು.  

ಖಾಸಗಿ ವಾಹನಗಳಲ್ಲಿ  ಪರವಾನಿಗೆ ಪಡೆದು ಅರಣ್ಯದಲ್ಲಿ ಸಂಚರಿಸುತ್ತಿದ್ದ ಪ್ರಾಣಿ ಪ್ರಿಯರಿಗೆ ಇಲಾಖೆಯ ವನ್ಯಜೀವಿ ಸಂರಕ್ಷಣಾ ವಿಭಾಗ ರಾಣೇಬೆನ್ನೂರು ಕೃಷ್ಣಮೃಗ ಅಭಯಾರಣ್ಯದಲ್ಲಿ ತಮ್ಮದೇ ವಾಹನದ ಮೂಲಕ ಸಫಾರಿ ವ್ಯವಸ್ಥೆ ಮಾಡಿದ್ದು, ಇದರ ಸದುಪಯೋಗವನ್ನು ಮಾಡಿಕೊಳ್ಳುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಜಿಂಕೆಗಳ ಜಾತಿಗಳಲ್ಲಿ ಕೃಷ್ಣಮೃಗವು ಒಂದು ಪ್ರಭೇದ. ಗಂಡು ಮೃಗಗಳಿಗೆ ಕೃಷ್ಣಮೃಗ ವೆಂದರೆ, ಹೆಣ್ಣಿಗೆ  ಚಿಗರೆಗಳೆಂದು ಕರೆಯುತ್ತಾರೆ.  ಹುಟ್ಟಿದಾಗ ಗಂಡು- ಹೆಣ್ಣು ಎರಡೂ ಬಂಗಾರ ಬಣ್ಣದ್ದಾಗಿರುತ್ತವೆ. ತದನಂತರದಲ್ಲಿ ಗಂಡು, ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಕೃಷ್ಣಮೃಗವೆಂದು ಕರೆಯಲಾಗುತ್ತದೆ. ಇವು ನಿಂತ ಸ್ಥಳದಿಂದ ಒಮ್ಮೆಲೇ ಒಂದು ಮೀಟರ್ ಎತ್ತರಕ್ಕೆ ನೆಗೆಯಬಲ್ಲವು. ವನ್ಯ ಜೀವಿಗಳ ಪೈಕಿ ಈ ಮೃಗಗಳು ಅತ್ಯಂತ ಸುಂದರ ಪ್ರಾಣಿಗಳಾಗಿದ್ದು, ಇವುಗಳ ಸೌಂದರ್ಯಕ್ಕೆ  ಸೀತೆ ಮಾರು ಹೋದದ್ದೇ ರಾಮಾಯಣ.

ಕೃಷ್ಣಮೃಗ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡುತ್ತಿರುವ ಇಲಾಖೆಯು, ಅವುಗಳ ಆಹಾರಕ್ಕೆ ಇಲ್ಲಿ ಬೆಳೆದಿರುವ ಚದರಂಗಿ ಸೇರಿದಂತೆ ಎಲ್ಲ ಮುಳ್ಳು ಕಂಟಿಗಳನ್ನು, ನೀಲಗಿರಿ ಮರಗಳನ್ನು ತೆರವು ಗೊಳಿಸಿದ್ದು, ಹುಲ್ಲುಗಾವಲು ಪ್ರದೇಶವಾಗಿಸಿದೆ. ಅರಣ್ಯದಾದ್ಯಂತ 120 ಕಡೆಗಳಲ್ಲಿ ಸಣ್ಣ, ಪುಟ್ಟ ಕೆರೆ ಕಟ್ಟೆಗಳನ್ನು  ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತಿದೆ. ಕೃಷ್ಣ ಮೃಗಗಳ ಜೊತೆಗೆ ಎರಲದ್ದು, ನವಿಲು, ಬುರಲಿ, ಕೌಜುಗ, ಕಪ್ಪಡ್ರೋಂಗೋ, ಕೋಗಿಲೆ, ಮೈನಾ, ಗಿಳಿ ಮುಂತಾದ ಪಕ್ಷಿಗಳು, ತೋಳ, ನರಿ, ಮುಳ್ಳುಹಂದಿ, ಕಾಡುಹಂದಿ, ಪೆಂಗೋಲಿನ್, ಉಡ, ಮುಂಗಸಿ, ಹಾವು, ಕೋತಿ, ಮೊಲ, ಹೈನಾ ಕತ್ತೆಕಿರುಬಗಳು  ಸಹ ಇಲ್ಲಿ ಸಹಬಾಳ್ವೆ ನಡೆಸಿವೆ. ಇವುಗಳನ್ನು ಸಫಾರಿ ವಾಹನದ ಮೂಲಕ ಪ್ರಾಣಿ ಪ್ರಿಯರು ವೀಕ್ಷಿಸಿ ಆನಂದಿಸಬಹುದಾಗಿದೆ. ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ ಅವರು ಈ ಸಫಾರಿ ವಾಹನಕ್ಕೆ ಅನುದಾನ ನೀಡಿರುತ್ತಾರೆ.

ರಾಣೇಬೆನ್ನೂರು ನಗರದಿಂದ 6 ಕಿಮೀ ದೂರದ ಈ ಅರಣ್ಯ, 119 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ  14.87 ಚ.ಕಿಮೀ ರಕ್ಷಿತ ವಲಯ,104 ಕಿಮೀದಷ್ಟು ಬಫರ್- ಕಮ್ ಪ್ರವಾಸೋದ್ಯಮ ವಲಯವೆಂದು ವಿಂಗಡಿಸಲಾಗಿದೆ. ಬೆಳಿಗ್ಗೆ 6 ರಿಂದ 8,  ಸಂಜೆ 4 ರಿಂದ 6 ವರೆಗೆ ಪ್ರಾಣಿ ಪಕ್ಷಿಗಳು ವೀಕ್ಷಣೆಗೆ ಲಭ್ಯವಿದ್ದು,  ಆ ಸಂದರ್ಭದಲ್ಲಿ ಸಫಾರಿಗೆ ಅವಕಾಶವಿದೆ. ಸಫಾರಿಗೆ ಹನ್ನೆರಡು ಜನರಿಗೆ ಸ್ಥಳಾವಕಾಶವಿರುವ ವಾಹನ ಲಭ್ಯವಿದೆ ಎನ್ನುವ ಎಲ್ಲ ಮಾಹಿತಿಯನ್ನು ಎಸಿಎಫ್ ಸತೀಶ್ ಪೂಜಾರ ವಿವರಿಸಿದರು.       

ಮನೋಹರ ಮಲ್ಲಾಡದ

error: Content is protected !!