ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ
ಹರಪನಹಳ್ಳಿ, ಅ. 7- ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಷೇರುದಾರರ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯಿರುವ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಗೋದಾಮು ಮತ್ತು ವ್ಯಾಪಾರಿ ಮಳಿಗೆಗಳ ಶಂಕುಸ್ಥಾಪನೆ ನೆರವೇರಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಸಂಘವು ವ್ಯವಹಾರಿಕವಾಗಿ ಉತ್ತಮ ಸಾಧನೆ ಮಾಡಿದ್ದಲ್ಲಿ, ಆ ಸಂಘಕ್ಕೆ ಹೆಚ್ಚು ಸಾಲಸೌಲಭ್ಯ ದೊರೆಯಲಿದೆ. ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ ನೀಡುವ ಮೂಲಕ ರೈತರ ಹಿತ ಕಾಯಬೇಕು ಮತ್ತು ಸಂಘದ ಷೇರುದಾರರ ಜೊತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಸಂಘದ ಠೇವಣಿದಾರರ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಸಂಘದ ಆಡಳಿತ ಮಂಡಳಿಯವರಿಗೆ ಅವರು ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಘದ ನಿರ್ದೇಶಕ ಎಂ.ವಿ.ಅಂಜಿನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 1976 ರಲ್ಲಿ ಆರಂಭವಾದ ಈ ಸಂಘವು ಪ್ರಾರಂಭದಲ್ಲಿ ಕೇವಲ 50 ಷೇರುದಾರರನ್ನು ಹೊಂದಿತ್ತು, ಇಂದು 5 ಸಾವಿರಕ್ಕೂ ಹೆಚ್ಚು ಷೇರುದಾರರನ್ನು ಒಳಗೊಂಡು 10 ಕೋಟಿಗೂ ಹೆಚ್ಚು ವ್ಯವಹಾರ ಹೊಂದಿದೆ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಮಾತನಾಡಿ, ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಬಿಡಿಸಿಸಿ ಬ್ಯಾಂಕ್‍ನಿಂದ ಮಂಜೂರು ಆದ ಹಣದಲ್ಲಿ ನಿಗದಿತ ಸಮಯದಲ್ಲಿ ಗುಣಮಟ್ಟದ, ಸುಸಜ್ಜಿತ ಕಟ್ಟಡ ನಿರ್ಮಿಸಿ, ರೈತರ ಅನುಕೂಲಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ ಚಿದಾನಂದ ಮಾತನಾಡಿ, ಸಹಕಾರಿ ಸಂಘಗಳು ಸಕಾಲದಲ್ಲಿ ರೈತರಿಗೆ ಸಾಲ ನೀಡಿದರೆ ಅವರು ಸಾಲದ ಸುಳಿಗೆ ಸಿಲುಕುವುದಿಲ್ಲ ಎಂದು ಹೇಳಿದರು.
ಸಂಘದ ಅಧ್ಯಕ್ಷ ದಂಡಿನ ಹರೀಶ್ ಅಧ್ಯಕ್ಷತೆ ವಹಿಸಿದ್ದರು, ಸಹಕಾರಿ ಸಂಘದ ಸಹಾಯಕ ನಿಬಂಧಕ ಶರಣಬಸಪ್ಪ, ಲೆಕ್ಕ ಪರಿಶೋಧನಾ ಸಹಾಯಕ ನಿರ್ದೇಶಕ ಷಣ್ಮುಖ, ಸಂಘದ ಉಪಾಧ್ಯಕ್ಷ ಗಣಾಚಾರಿ ದುರುಗಪ್ಪ, ನಿರ್ದೇಶಕರಾದ ಪೂಜಾರ ದಕ್ಷಿಣಮೂರ್ತಿ, ಹರಕುಣಿ ಚಮನ್‌ವಲಿ, ಗಿಡ್ಡಳ್ಳಿ ನಾಗರಾಜ, ಕೆ.ಮೆಹಬೂಬ್ ಬಾಷಾ, ಚಿಕ್ಕೇರಿ ವೆಂಕಟೇಶ, ಎಂ.ವಿ.ಕೃಷ್ಣಕಾಂತ, ಟಿ.ಎಚ್.ಎಂ.ಮಂಜುನಾಥ, ಎಂ.ಸುಮಂಗಲ, ಜಿ.ಸುಜಾತ, ಗಾಟಿನ ಬಸವರಾಜ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಬಸವರಾಜ, ಪುರಸಭಾ ಸದಸ್ಯರಾದ ರೆಹಮಾನ್, ಲಾಟಿ ದಾದಾಪೀರ್, ಗಣೇಶ, ಭರತೇಶ ಸೇರಿದಂತೆ ಇತರರು ಇದ್ದರು.