ದಾವಣಗೆರೆ, ಅ. 6- ಬಹುಭಾಷಾ ಕವಿಗೋಷ್ಠಿಯು ಭಾವೈಕ್ಯತೆಯ ಸಾಮರಸ್ಯ ಕಲ್ಪಿಸುವ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ದಾವಣಗೆರೆ ನಗರದಲ್ಲೇ ಈ ಗೋಷ್ಠಿ ಮಾದರಿಯಾಗಿದೆ ಎಂದು ಸಾಹಿತಿ ವೀರಭದ್ರಪ್ಪ ತೆಲಗಿ ಹೇಳಿದರು.
ದಸರಾ ಹಬ್ಬದ ಪ್ರಯುಕ್ತ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ ಕಾಣಲಿದೆ ಹಾಗಾಗಿ ಕವಿತೆಗೂ ಕಣ್ಣು ಇದೆ ಹಾಗಾಗಿ ಕವಿ ಶ್ರೇಷ್ಠನಾಗಲು ಪ್ರಜ್ಞಾಪೂರ್ವ ಜ್ಞಾನದ ಅವಶ್ಯ ಬಹುಮುಖ್ಯ ಎಂದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ಎಚ್. ರಾಜಶೇಖರ ಗುಂಡಗಟ್ಟಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಭಾಷೆ ಮತ್ತು ಭಾವೈಕ್ಯತೆಯ ಸಾಮರಸ್ಯ ಅಗತ್ಯವಿದ್ದು, ಇಂತಹ ಕಾರ್ಯಕ್ರಮಗಳಿಂದ ಸಾಮರಸ್ಯ ಸಾಧಿಸಬಹುದು ಎಂದು ಹೇಳಿದರು.
ಬಹುಭಾಷಾ ಕವಿಗೋಷ್ಠಿಯು ಪರಿಷತ್ನ ಮೊದಲ ಪ್ರಯೋಗವಾಗಿದೆ. ಇದು ಸಮಾಜಕ್ಕೆ ಒಂದು ಬಳುವಳಿಯಾಗಿ ಮುಂದಿನ ಪೀಳಿಗೆಯೂ ಇದನ್ನು ಬೆಳೆಸಬೇಕು ಎಂದರು.
ಕಾನೂನು ಕೃತಿಗಳ ಬರಹಗಾರ ಕೆ. ದಾದಾಪೀರ್ ಕಾರ್ಯಕ್ರಮ ಉದ್ಘಾಟಿಸಿದರು. ಗೋಷ್ಠಿಯಲ್ಲಿ 31 ಕವಿಗಳು ಕವನ ವಾಚನ ಮಾಡಿದರು.
ಸ್ಪೂರ್ತಿ ಪ್ರಕಾಶನದ ಅಧ್ಯಕ್ಷ ಎಂ. ಬಸವರಾಜ, ಗೌರವ ಸಲಹೆಗಾರರಾದ ಸಂಧ್ಯಾ ಸುರೇಶ್, ಮಹಾಂತೇಶ ಬಿ.ನಿಟ್ಟೂರು, ಚುಸಾಪ ಕಾರ್ಯದರ್ಶಿ ಕೆ.ಪಿ.ತಾರೇಶ್ ಅಣಬೇರು, ಸಂಘಟನಾ ಕಾರ್ಯದರ್ಶಿ ಪಕ್ಕೀರೇಶ ಆದಾಪುರ, ಸಹ ಕಾರ್ಯದರ್ಶಿ ಬಿ.ಎಂ.ಜಿ ವೀರೇಶ, ಉಮಾದೇವಿ ಹಿರೇಮಠ, ಸತ್ಯಭಾಮ, ಸುನೀತಾ ಪ್ರಕಾಶ, ಲಲಿತಕುಮಾರ ಜೈನ್, ಜಿ.ವಿ.ಸುನೀತಾ ಇತರರು ಇದ್ದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್, ಸ್ಪೂರ್ತಿ ಪ್ರಕಾಶನ, ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.