ಬಂಗಾರ ಕದ್ದು ಬಾಡಿಗೆ ಮನೆಯಲ್ಲಿದ್ದ ಮಹಿಳೆ: ಬಂಧನ

ದಾವಣಗೆರೆ, ಅ.6- ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯೊಬ್ಬರು ಬಂಗಾರದ ಆಭರಣ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದ್ದು, ಆರೋಪಿತ ಮಹಿಳೆಯನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.

ನಿಟ್ಟುವಳ್ಳಿಯ ಕೊಟ್ಟೂರೇಶ್ವರ ಬಡಾವಣೆಯ ನಿವಾಸಿ ತನುಜಾ (24) ಬಂಧಿತ ಗೃಹಿಣಿ. 

ಕಳೆದ ಅಕ್ಟೋಬರ್ 1ರಂದು ಭಗತ್ ಸಿಂಗ್ ನಗರ ನಿವಾಸಿ ಪ್ರಕಾಶ್ ಎಂಬುವವರು ಮನೆಯಲ್ಲಿಟ್ಟಿದ್ದ ಒಟ್ಟು ಸುಮಾರು 63 ಗ್ರಾಂ ಬಂಗಾರದ ಆಭರಣಗಳು ಕಳ್ಳತನವಾಗಿದ್ದು, ನಮ್ಮ ಮನೆಯ 1 ನೇ ಮಹಡಿಯ ಮನೆಯಲ್ಲಿ ಬಾಡಿಗೆಗೆ ಇದ್ದ ತನುಜಾ ಅವರ ಮೇಲೆ ಅನುಮಾನವಿದೆ ಎಂದು ಕೆಟಿಜೆ ನಗರ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನುಜಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದನ್ನು ಮಹಿಳೆ ಒಪ್ಪಿಕೊಂಡಿದ್ದಾಳೆ. ಬಂಧಿತಳಿಂದ 3,34,800 ರೂಪಾಯಿ ಮೌಲ್ಯದ 63 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಹೆಚ್.ಎಸ್., ಪಿ.ಎಸ್.ಐ ಸಾಗರ್ ಅತ್ತರವಾಲಾ ಮತ್ತು ಸಿಬ್ಬಂದಿಯಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್, ಗೌಡಸಿದ್ದಪ್ಪ, ಪುರುಶೋತ್ತಮ, ಗಣೇಶ, ಗೌರಮ್ಮ, ಗೀತಾ, ಭಾವನ ಬೆಳ್ಳೂಡಿ, ರೇಣುಕಾ ಅವರು ಆರೋಪಿ ಪತ್ತೆ ಕಾರ್ಯದಲ್ಲಿದ್ದರು.

error: Content is protected !!